Sunday 30 September 2012

ಆರ್.ಕೆ ನಾರಾಯಣ್:ಭಾಗ-೩


ಕಳೆದ ಸಂಚಿಕೆಯಿಂದ:

ಕನ್ನಡಿಗರು ಯಾರನ್ನೂ ನೀವು ತೆಲುಗರು, ತಮಿಳರು, ಹಿಂದಿಯವರು ಎಂದೂ ಯಾವತ್ತೂ ಯಾರನ್ನೂ ಬೇಧಭಾವ ಮಾಡಿಲ್ಲ, ಮಾಡುವುದೂ ಇಲ್ಲ. ಇಡೀ ಭಾರತದಲ್ಲಿ ಎಲ್ಲಾ ಭಾಷೆಗಳನ್ನಾಡುವ ಮಂದಿ ಕರ್ನಾಟಕದಲ್ಲಿ ಇರುವುದೇ ಅದಕ್ಕೆ ಸಾಕ್ಷಿ. ಆರ್.ಕೆ ಯವರ ಮನೆ ಭಾಷೆ ತಮಿಳು. ಮಾಸ್ತಿಯವರ ಮನೆ ಭಾಷೆಯೂ ಸಹ ತಮಿಳು, ಮಾಸ್ತಿಯವರನ್ನು ನಾವು ಕನ್ನಡದ ಆಸ್ತಿ ಎಂದು ಕರೆಯುತ್ತೇವೆ. ನಾವು ಅವರನ್ನು ತಮಿಳರೆಂದು ನಾವು ವಿರೋಧಿಸುತ್ತೇವಾ? ಖಂಡಿತಾ ಇಲ್ಲ. ಎಂದೆಂದಿಗೂ ಸಹ ಇಲ್ಲ.

ಆರ್.ಕೆ ಯವರನ್ನು ಯಾರೂ ಕನ್ನಡದಲ್ಲಿ ಬರೆಯಲು ಒತ್ತಾಯಿಸಲಿಲ್ಲ. ಅವರು ಆಂಗ್ಲ ಅಥವಾ ತಮಿಳು/ತೆಲುಗು ಹೀಗೆ ಯಾವ ಭಾಷೆಯಲ್ಲಾದರೂ ಬರೆಯಲಿ, ಅದು ಅವರ ಆಜನ್ಮ ಸಿದ್ದ ಹಕ್ಕು. ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ನಿಮ್ಮನ್ನು ನಾವು ಕನ್ನಡಿಗರೆಂದು ಒಪ್ಪಿಕೊಂಡು, ಕನ್ನಡದಲ್ಲಿ ನಾಲ್ಕು ಮಾತನಾಡಿ ಎಂದು ತುಂಬಿದ ಸಭೆಯಲ್ಲಿ ಕೇಳಿಕೊಂಡಾಗ, ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ತಮಿಳಿನಲ್ಲಿ ಮಾತನಾಡುತ್ತೇನೆ ಎಂದಾಗ ಯಾರಿಗೆ ತಾನೆ ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಲು ಸಾಧ್ಯ? ಒಬ್ಬ ವ್ಯಕ್ತಿ ೬೦-೭೦ ವರ್ಷ ಒಂದು ರಾಜ್ಯದಲ್ಲಿ ವಾಸ ಮಾಡಿಕೊಂಡಿದ್ದರೂ ಕನ್ನಡದಲ್ಲಿ ಮಾತನಾಡಲು ಇಚ್ಚಿಸುವುದಿಲ್ಲ ಎಂದರೆ ಹೇಗೆ? ಈ ರಾಜ್ಯದಲ್ಲಿ ಎಲ್ಲಾ ಸಕಲ ಸೌಲಭ್ಯಗಳನ್ನು ಅನುಭವಿಸಿ ಈ ರಾಜ್ಯದ ಭಾಷೆ ಮಾತ್ರ ಬೇಡ ಎಂದರೆ ಹೇಗೆ? ಇದೇ ಏನು ನೀವು ಈ ರಾಜ್ಯಕ್ಕೆ/ಭಾಷೆಗೆ/ಸಂಸ್ಕೃತಿಗೆ ತೋರಿಸುವ ಗೌರವ, ಮರ್ಯಾದೆ? ಇದನ್ನು ಕೇಳುವುದು ತಪ್ಪಾ?

ಒಬ್ಬ ವ್ಯಕ್ತಿ ತಾನು ಹುಟ್ಟಿರುವ, ಬೆಳೆದಿರುವ ರಾಜ್ಯ/ದೇಶವನ್ನು ಬಿಟ್ಟು ಬೇರೆ ರಾಜ್ಯ/ದೇಶಕ್ಕೆ ಯಾಕಾಗಿ ಹೋಗುತ್ತಾನೆ? ವಿದ್ಯಾಭ್ಯಾಸ/ಕೆಲಸ/ಆರೋಗ್ಯ/ಉದ್ದಿಮೆ/ಕ್ರೀಡೆ/ಭವಿಷ್ಯ ಹೀಗೆ ಅನೇಕ ಕಾರಣಗಳಿರುತ್ತದೆ. ಹೆಚ್ಚಿನ ಜನ ತಮ್ಮ ಬಂಧು, ಬಾಂಧವರನ್ನು ಬಿಟ್ಟು ಬೇರೆ ಕಡೆ ನೆಲಸಿದಾಗ ಅವರನ್ನು ಯಾವ ರಾಜ್ಯದ ಜನರೂ ಸಾಮಾನ್ಯವಾಗಿ ಹೊರಗಟ್ಟುವುದಿಲ್ಲ. ಅವರಿಗೆ ಬೇಕಾದ ಸಕಲ ಸವಲತ್ತುಗಳೂ ಸಹ ಆ ರಾಜ್ಯದ ಜನ ಒದಗಿಸುತ್ತಾರೆ. ಇದನ್ನೇ ಮಾನವೀಯತೆ ಎನ್ನುವುದು. ಮೊದಮೊದಲು ಹೊರಗಿನಿಂದ ಬಂದವರಿಗೆ ಅಲ್ಪ ಸ್ವಲ್ಪ ಕಷ್ಟವಾದರೂ ಸಹ ಕ್ರಮೇಣ ಅವರಿಗೆ ಎಲ್ಲವೂ ಸುಲಭವಾಗುತ್ತದೆ. ಹೊಸ ಭಾಷೆ, ಹೊಸ ಪರಿಸರ, ಹೊಸ ಆಚಾರ/ವಿಚಾರ, ಸಂಸ್ಕೃತಿ ಹೀಗೆ ಎಲ್ಲದಕ್ಕೂ ಹೊಂದಿಕೊಳ್ಳಬೇಕಾಗುತ್ತದೆ. ಹಾಲಿಗೆ ಸಕ್ಕರೆಯನ್ನು ಹಾಕಿದಾಗ ಹೇಗೆ ಅದು ಹೊಂದಿಕೊಳ್ಳೂತ್ತದೆಯೋ ಹಾಗೆ ಬೇರೆ ರಾಜ್ಯದ ಜನರು ತಮಗೆ ಆಶ್ರಯ ಕೊಟ್ಟ ಹೊಸ ನಾಡಿಗೆ ಹೊಂದಿಕೊಂಡಾಗ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳದ ಕೆಲ ಮಂದಿ ತಮ್ಮ ರಾಜ್ಯ/ಭಾಷೆ/ಸಂಸ್ಕೃತಿ/ಆಚಾರ/ವಿಚಾರಗಳೇ ಎಲ್ಲಕ್ಕಿಂತ ಮಿಗಿಲು ಎಂಬ ಭಾವನೆಯಿಂದ ನಡೆದುಕೊಂಡರೆ ಆಗ ಸಮಸ್ಯೆಗಳು ಶುರುವಾಗುತ್ತವೆ. (ಮಿಕ್ಕಿದ್ದು ನಾಳೆಗೆ)

No comments:

Post a Comment