Saturday 1 September 2012

ಉತ್ಪಾದಿತ ಮರಳು :


ಮನೆ/ಕಟ್ಟಡ ಕಟ್ಟಿಸುತ್ತಿರುವವರಿಗೆ ಮತ್ತು ಮುಂದೆ ಕಟ್ಟಿಸುವವರಿಗೆ ಒಂದು ಸಂತೋಷದ ಸುದ್ದಿಯೊಂದು ಬಂದಿದೆ. ಈಗ ನೈಸರ್ಗಿಕ ಮರಳು ಒಂದು ಲಾರಿ ಲೋಡಿಗೆ ಸುಮಾರು ೨೮ ರಿಂದ ೩೦ ಸಾವಿರ ರೂಪಾಯಿಗಳಾಗುತ್ತದೆ. ಫಿಲ್ಟರ್ ಮರಳು ಸುಮಾರು ೧೮-೨೦ ಸಾವಿರ ರೊಪಾಯಿಗಳಿಗೆ ಸಿಗುತ್ತದೆ. ಮಧ್ಯಮ ಮರಳು ಸುಮಾರು ೨೫ ರಿಂದ ೨೮ ಸಾವಿರ, ಸಾಮಾನ್ಯ ಮರಳು ೨೨ ಸಾವಿರ ದಿಂದ ೨೫ ಸಾವಿರವಾಗುತ್ತದೆ.  ನೈಸರ್ಗಿಕ ಮರಳು ಸದೃಡ,  ನೀರು ಮತ್ತು ಸೀಮೆಂಟ್ ಇದರಲ್ಲಿ ನೈಜವಾಗಿ ಹೊಂದಿಕೆಯಾಗಿ ಕಟ್ಟಡಗಳಲ್ಲಿ ಬಿರುಕು ಉಂಟಾಗುವುದಿಲ್ಲ. ಮನೆ ಮತ್ತು ಕಟ್ಟಡಗಳ ಆಯಸ್ಸು ಜಾಸ್ತಿ.  ಆದರೆ ಫಿಲ್ಟರ್ ಮರಳು ಹಾಗಲ್ಲ. ಅದು ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಕ್ಕರೂ ಮುಂದೆ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಮನೆ ಮತ್ತು ಕಟ್ಟಡ ಆಯಸ್ಸೂ ಸಹ ಬಹಳ ಕಡಿಮೆ. ನೀರು ಮತ್ತು ಸೀಮೆಂಟ್ ಹೊಂದಿಕೆಯಾಗುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಫಿಲ್ಟರ್ ಮರಳು ನಿಜವಾದ ಮರಳೇ ಅಲ್ಲ. ಮಣ್ಣನ್ನು ಸೋಸಿ ಅದರಿಂದ ಬರುವ ಮರಳಿನಂತ ಕಾಣುವ ಮಣ್ಣನ್ನೇ ಮರಳೆಂದು ಕಟ್ಟಡಗಳನ್ನು ಕಟ್ಟಲು ಬಳಸುತ್ತಾರೆ. ಹೆಚ್ಚಿನ ಜನರಿಗೆ ನೈಸರ್ಗಿಕ ಮರಳು ಮತ್ತು ಫಿಲ್ಟರ್ ಮರಳಿನ ವ್ಯತ್ಯಾಸ ಗೊತ್ತಾಗುವುದಿಲ್ಲ, ಹಾಗಾಗಿ ಫಿಲ್ಟರ್ ಮರಳನ್ನು ನೈಸರ್ಗಿಕ ಮರಳೆಂದು ಮೋಸ ಮಾಡಿದವರೂ ಉಂಟು.

ಈಗ ನೈಸರ್ಗಿಕ ಮರಳು ಸಿಗುವುದು ಬಹಳ ಕಮ್ಮಿ. ನದಿ, ಜಲಾಶಯದಿಂದ ತರುವ ಮರಳು ಈಗ ಯಾವುದಕ್ಕೂ ಸಾಕಾಗುವುದಿಲ್ಲ. ನೈಸರ್ಗಿಕ ಮರಳಿನ ಲೂಟಿ ಎಲ್ಲಾ ಕಡೆ  ಜಾಸ್ತಿಯಾಗಿ ಅದು ಒಂದು ದೊಡ್ಡ ಅವ್ಯವಹಾರವಾಗಿ ಬೆಳೆದಿದೆ. ಈಗ ಹೊಸದಾಗಿ ಮರಳನ್ನೂ ಸಹ ಉತ್ಪಾದಿಸಬಹುದು. ಇದನ್ನು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದರ ಗುಣಮಟ್ಟ ಪರೀಕ್ಷಿಸಿ ಇದನ್ನು ಉಪಯೋಗಿಸಬಹುದೆಂಬ ಖಾತ್ರಿಯನ್ನು ನೀಡಿದೆ. ಗ್ರಾನೈಟ್, ಸ್ಯಾಂಡ್ ಸ್ಟೋನ್ ಮತ್ತಿತ್ತರ ಗುಣಮಟ್ಟದ ಕಲ್ಲುಗಳನ್ನು ವಿ.ಎಸ್.ಐ ಯಂತ್ರದಿಂದ ಪುಡಿಮಾಡಿ ಮರಳಾಗಿಸುತ್ತದೆ. ಇದು ವಿಭಿನ್ನ ಶ್ರೇಣಿಗಳಲ್ಲಿ ದೊರಕುತ್ತದೆ. ಇದು ನೈಸರ್ಗಿಕ ಮರಳಿನಷ್ಟೇ ಪರಿಣಾಮಕಾರಿ.  ಇದು ನೀರು ಮತ್ತು ಸೀಮೆಂಟ್ ನಲ್ಲಿ ಹೆಚ್ಚು ಹೊಂದಿಕೆಯಾಗುತ್ತದೆ. ಇದು ಸುಮಾರು ೧೦ ಸಾವಿರ ರೂಪಾಯಿಗಳಿಗೆ ಸಿಗುತ್ತದೆ. ಕಲ್ಲುಗಣಿಗಳಿಂದ ಬರುವ ಧೂಳನ್ನು ಉತ್ಪಾದಿತ ಮರಳೆಂದು ಮೋಸ ಮಾಡುತ್ತಾರೆ,  ಆದರೆ ಅದು ಉತ್ಪಾದಿತ ಮರಳಲ್ಲ. ಆದ್ದರಿಂದ ಸಾರ್ವಜನಿಕರು ಸ್ವಲ್ಪ ಎಚ್ಚರದಿಂದ ಇದ್ದರೆ ಒಳ್ಳೆಯದು.

ಉತ್ಪಾದಿತ ಮರಳನ್ನು ಈಗಾಗಲೇ ವಿಶ್ವದ ಅನೇಕ ಕಡೆಗಳಲ್ಲಿ ಬಳಸುತ್ತಿದ್ದಾರೆ. ನಮ್ಮೆ ದೇಶದ ದಿಲ್ಲಿ, ಮುಂಬಯಿಗಳಲ್ಲಿ ಈ ಉತ್ಪಾದಿತ ಮರಳನ್ನು ಈಗಾಗಲೇ ಬಳಸುತ್ತಿದ್ದಾರೆ. ಇದು ಅಲ್ಲಿ ಕಡ್ಡಯವೂ ಹೌದು. ಇದರಲ್ಲಿ ಮಣ್ಣಿನ ಅಂಶವು ಇರುವುದಿಲ್ಲ, ಹಾಗಾಗಿ ಇದರಲ್ಲಿ ನೀರು ಮತ್ತು ಸೀಮೆಂಟ್ ಯಶಸ್ವಿಯಾಗಿ ಹೊಂದಿಕೆಯಾಗುತ್ತದೆ. ನೈಸರ್ಗಿಕ ಮರಳನ್ನು ಬಳಸುವ ಬದಲು ಈ ಉತ್ಪಾದಿತ ಮರಳನ್ನು ಉಪಯೋಗಿಸುವುದರಿಂದ ಕಟ್ಟಡಕ್ಕೆ ತಗುಲುವ ಖರ್ಚು ಬಹಳ ಕಡಿಮೆಯಾಗುತ್ತದೆ. ಮನೆ/ಕಟ್ಟಡ ಸದೃಡವಾಗಿರುವುದಲ್ಲಿ ಯಾವ ಅನುಮಾನವೂ ಬೇಡ. ನಮ್ಮ ಅಂತರ್ಜಲ ಸುರಕ್ಷಿತವಾಗಿರುತ್ತದೆ. ನೈಸರ್ಗಿಕ ಮರಳು ಕೆರೆ, ನದಿ ಮತ್ತು ಜಲಾಶಯಗಳಲ್ಲೇ ಉಳಿದು ನಮ್ಮೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತದೆ.  ಪ್ರಾಣಿ ಪಕ್ಷಿ ಸಂಕುಲಗಳು ಮತ್ತು ನಮ್ಮ ಪರಿಸರ ಉಳಿಯುತ್ತವೆ.

No comments:

Post a Comment