Sunday 9 September 2012

ದೇವರೆಲ್ಲಿದ್ದಾನೆ? ಭಾಗ-೨


ಕಳೆದ ಸಂಚಿಕೆಯಿಂದ

ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ತನ್ನ ತಾಯಿ, ತಂದೆ, ತಾತ, ಅಜ್ಜಿ, ಶಾಲೆಯ ಗುರುಗಳಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತಾ, ಅವುಗಳನ್ನು ಓದುತ್ತಾ ದೇವರ ಬಗ್ಗೆ ಭಯ ಮಿಶ್ರಿತ ಭಕ್ತಿ ಭಾವದಿಂದ ದೇವರನ್ನು ನಂಬುತ್ತಾ, ಆರಾಧಿಸುತ್ತಾ ಹೋಗುತ್ತದೆ. ಅದರ ಜೊತೆಜೊತೆಗೆ ತನ್ನ ಧರ್ಮ, ಜಾತಿ, ಕುಲ, ಸಂಪ್ರದಾಯ, ಸ್ವರ್ಗ, ನರಕದ ಅರಿವನ್ನೂ ಹಿರಿಯರು ಅದರ ತಲೆಗೆ ತುಂಬುತ್ತಾರೆ. ಕೆಲವು ಮಕ್ಕಳು ಯೌವನದ ಹೊಸ್ತಿಲಿಗೆ ಬಂದಾಗ ತನ್ನ ಧರ್ಮ, ಜಾತಿಯ ಬಗ್ಗೆ ಹೆಚ್ಚಿನ ಒಲವನ್ನು ತೋರಿ, ಹೆಚ್ಚಿನ ಜ್ಞಾನವನ್ನು ಸಂಪಾದಿಸಿ ಲೋಕ ಕಲ್ಯಾಣಕ್ಕಾಗಿ ಸನ್ಯಾಸಿಗಳಾಗಿ, ಧರ್ಮ ಗುರುಗಳಾಗಿ ಸಮಾಜಮುಖಿಗಳಾಗಿರುವುದೂ ಉಂಟು.

ಇನ್ನು ಕೆಲವರು ತಮ್ಮ ಜಾತಿ, ಧರ್ಮದ ಬಗ್ಗೆ ಅಂದಾಭಿಮಾನವನ್ನು ಬೆಳೆಸಿಕೊಂಡು, ಅಲ್ಪ ಸ್ವಲ್ಪ ತಿಳಿದುಕೊಂಡು ಹಾಗೂ ತಿಳಿದುಕೊಂಡಿರುವುದನ್ನೂ ಸಹ ತಪ್ಪುತಪ್ಪಾಗಿ ಅರ್ಥೈಸಿಕೊಂಡು ತಮ್ಮ ಜಾತಿ, ಧರ್ಮ, ಸಂಪ್ರದಾಯವೇ ಮೇಲು, ಉಳಿದವೆಲ್ಲವೂ ಕೀಳು ಎಂಬ ಭಾವನೆಯಿಂದ ಸಮಾಜಕ್ಕೆ ಕಂಟಕ ಪ್ರಾಯವಾಗಿ ತಮ್ಮ ಬದುಕನ್ನೂ ಜೊತೆಗೆ ಸಮಾಜವನ್ನು ನಾಶಮಾಡಲು ಹೊರಟ ಸಮಾಜಘಾತಕರನ್ನೂ ಸಹ ನಾವು ಕಾಣಬಹುದು.

ಇನ್ನು ಕೆಲವು ಮಕ್ಕಳಿಗೆ ತಮ್ಮ ಕಾಲೇಜು ವಿಧ್ಯಾಭ್ಯಾಸದ ಹೊತ್ತಿಗೆ, ತಾವು ಇಷ್ಟರವರೆಗೆ ನಂಬಿದ್ದೆಲ್ಲಾ ಸುಳ್ಳು ಅಂತ ಆನಿಸುವುದಕ್ಕೆ ಶುರುವಾಗುತ್ತದೆ. ಅವರ ಕೆಲವು ಪ್ರಶ್ನೆಗಳಿಗೆ ಅವರಿಗೆ ಸಮಾಧಾನಕರವಾದ ಉತ್ತರಗಳು ಸಿಗದೆ ಹತಾಶೆಗೊಂಡು ನಾಸ್ತಿಕವಾದವನ್ನು ಅಪ್ಪಿಕೊಂಡವರನ್ನೂ ಸಹ ನಾವು ಸಮಾಜದಲ್ಲಿ ಅಲ್ಲಲ್ಲಿ ಕಾಣಬಹುದು. ಅಂತಹವರ ಸಂಖ್ಯೆ ಹೆಚ್ಚಿನದಲ್ಲಿಲ್ಲದಿದ್ದರೂ ಗಣನೀಯವಾಗಿರುವುದಂತೂ ಸತ್ಯ. (ಮಿಕ್ಕಿದ್ದು ನಾಳೆಗೆ)

No comments:

Post a Comment