Friday, 30 November 2012

ಕಾವೇರಿ


ಕಾವೇರಿ
ನದಿ
ವಿವಾದ
ಪರಿಹಾರವಾಗುವುದೆಂದು?

ಜಯಲಲಿತಾ
ಕರ್ನಾಟಕಕ್ಕೆ
ಮುಖ್ಯಮಂತ್ರಿ
ಆದ ದಿನದಂದು!!!

Thursday, 29 November 2012

ವಿದೇಶಿ ನೇರ ಬಂಡವಾಳ: ಭಾಗ-೬


ಕಳೆದ ಸಂಚಿಕೆಯಿಂದ

ಇನ್ನು ರೈತರಿಗೆ ಬಹಳ ದೊಡ್ಡ ಹೊಡೆತ ಎಂದರೆ, ವಿದೇಶಿ ಸಂಸ್ಥೆ ಹೇಳಿದ ಪದಾರ್ಥಗಳನ್ನೇ ಅವರು ಬೆಳೆಯಬೇಕಾಗಬಹುದು ಮತ್ತು ಅದನ್ನು ಅವರಿಗೆ ಮಾರಬೇಕು. ಇತರರಿಗೆ ಮಾರುವಂತಿಲ್ಲ. ಯಾಕೆಂದರೆ ಅವರಿಗೆ ಬೀಜ, ರಸಗೊಬ್ಬರ, ಬೇಕಾದಾಗ ಹಣ ಕಾಸಿನ ನೆರವನ್ನು ಒದಗಿಸಿ ಅವರಿಂದ ಒಂದು ಒಪ್ಪಂದವನ್ನು ಮಾಡಿಕೊಂಡಿರ ಕೊಂಡಿರಲಾಗುತ್ತದೆ. ಅವರು ಬೆಳೆದ ಎಲ್ಲಾ ಬೆಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವರಿಗೆ ಬೇಕಾದಂತಹುದ್ದನ್ನೇ ಆಯ್ಕೆ ಮಾಡಿ ಉಳಿದವನ್ನು ರೈತರ ತಲೆಗೆ ಕಟ್ಟುವ ಸಾಧ್ಯತೆಗಳು ಕಾಣಬರುತ್ತದೆ. ಉದಾಹರಣೆಗೆ ೧ ಟನ್ ಟಮೇಟೊ ಹಣ್ಣಿನಲ್ಲಿ ಸುಮಾರು ಕಾಲು ಭಾಗವನ್ನಷ್ಟೆ ತೆಗೆದುಕೊಂಡು ಉಳಿದ ಮುಕ್ಕಾಲು ಭಾಗವನ್ನು ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬ ಕಾರಣ ಒಡ್ಡಿ ತೆಗೆದುಕೊಳ್ಳದೆ ಇರಬಹುದು. ಆಗ ರೈತ ಉಳಿದ ಮುಕ್ಕಾಲು ಭಾಗವನ್ನು ಏನು ಮಾಡಬೇಕು? ರೈತ ಎಲ್ಲದಕ್ಕೂ ಕಂಪನಿಗಳ ಮರ್ಜಿಯಲ್ಲೇ ಇರಬೇಕಾಗುತ್ತದೆ. ಭೂಮಿಯ ಒಡೆಯತಾನಾದರೂ, ತನ್ನ ಭೂಮಿಯಲ್ಲೇ ಕೆಲಸಗಾರನಂತೆ ದುಡಿಯಬೇಕಾಗಬಹುದು. ರೈತ ಕಾಲ ಕ್ರಮೇಣ ಪರಾವಲಂಬಿಯಾಗುವುದು ಜಾಸ್ತಿಯಾಗುತ್ತದೆ.

ಸಾಮಾನ್ಯ ನಾಗರೀಕರಿಗೆ ಮೊದಮೊದಲು ತಾವು ಕೊಳ್ಳುವ ಪದಾರ್ಥಗಳ ಬೆಲೆ ಸ್ವಲ್ಪ ಕಡಿಮೆಯಂತೆ ಕಂಡು ಬಂದರೂ ದಿನ ಕಳೆದಂತೆ ಅವರು ಹೊಸ ದರವನ್ನು ತಮ್ಮಿಷ್ಟಕ್ಕೆ ತಕ್ಕಂತೆ ಹೆಚ್ಚು ಮಾಡುವು ಸಾಧ್ಯತೆಗಳಿವೆ. ಜನರಿಗೆ ಬೇರೆ ಆಯ್ಕೆಗಳು ಇರುವುದೇ ಇಲ್ಲ. ಚಿಲ್ಲರೆ ಅಂಗಡಿಗಳ ಬದಲಿಗೆ ಇಂತಹ ಸೂಪರ್ ಬಜಾರ್, ದೊಡ್ಡ ಮಾಲ್ ಗಳಲ್ಲಿಯೇ ಜನರು ತಮಗೆ ಬೇಕಾದ ಪದಾರ್ಥಗಳನ್ನು ಖರೀದಿಸಬೇಕಾಗಬಹುದು. ಎಲ್ಲೆಲ್ಲೂ ಮಾಲ್ ಸಂಸ್ಕೃತಿ ಉದಯವಾಗಬಹುದು. ಇದು ಕೇವಲ ನಗರ ಪ್ರದೇಶಗಳನ್ನಷ್ಟೇ ಅಲ್ಲದೆ ಜಿಲ್ಲಾ ಕೆಂದ್ರಗಳಲ್ಲೂ ತಲೆಯೆತ್ತಬಹುದು. ನಮ್ಮಲ್ಲಿ ಸ್ವವಲಂಬನೆ ಎಂಬುದು ಬತ್ತಿಹೋಗಿ ಎಲ್ಲದ್ದಕ್ಕೂ ಇಂತಹ ದೊಡ್ಡ ಕಂಪನಿಗಳ ಆಶ್ರಯದಲ್ಲೇ ಬದುಕಬೇಕಾಗಬಹುದು. ದೊಡ್ದ ಮೀನು ಚಿಕ್ಕ ಚಿಕ್ಕ ಮೀನುಗಳನ್ನು ಸ್ವಾಹ ಮಾಡುವಂತೆ ಇಂತಹ ದೊಡ್ಡ ಕಂಪನಿಗಳು ಚಿಕ್ಕಿ ಪುಟ್ಟ ಅಂಗಡಿಗಳನ್ನು ನುಂಗಿಬಿಡುವ ಸಾಧ್ಯತೆಗಳು ಕಾಣಬರುತ್ತದೆ. ಹೀಗೆ ಅನೇಕ ಅನುಮಾನಗಳು ಕಾಡುತ್ತವೆ. ಇದಕ್ಕೆ ಕಾಲವೇ ಉತ್ತರಿಸಬೇಕೇನೋ? (ಮುಗಿಯಿತು)

Wednesday, 28 November 2012

ವಿದೇಶಿ ನೇರ ಬಂಡವಾಳ: ಭಾಗ-೫


ಕಳೆದ ಸಂಚಿಕೆಯಿಂದ

ನಾಗರಿಕರಿಗೆ ವಿದೇಶಿ ನೇರ ಬಂಡವಾಳದಿಂದ ಏನು ಪ್ರಯೋಜನ ಎಂದು ನೋಡತೊಡಗಿದರೆ, ನಾಗರಿಕರಿಗೆ ಒಳ್ಳೊಳ್ಳೆಯ ಅಂತರರಾಷ್ಟೀಯ ಗುಣ ಮಟ್ಟದ ವಸ್ತುಗಳು ಇಲ್ಲೇ ಸುಲಭದಲ್ಲಿ ಸಿಗಬಹುದು. ಅದನ್ನು ಹುಡುಕಿಕೊಂಡು ಹೊರ ದೇಶಕ್ಕೆ ಹೋಗುವ ಅವಶ್ಯಕತೆ ಕಂಡುಬರುವುದಿಲ್ಲ. ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಸಿಗುತ್ತದೆ, ಅದೂ ಕಡಿಮೆ ದರದಲ್ಲಿ. ಜನರಿಗೆ ಹೊಸ ಉದ್ಯೋಗಾವಕಾಶಗಳು ಸಿಗುತ್ತದೆ, ಆಕರ್ಷಕ ವೇತನದೊಂದಿಗೆ. ನಮ್ಮ ಶೇರು ಮಾರುಕಟ್ಟೆಗೆ ಒಳಿತಾಗಬಹುದು. ರಿಲಯನ್ಸ್, ಟಾಟ, ಬಿರ್ಲ್ಲಾದಂತಹ ಕಂಪನಿಗಳಿಗೆ ವಿದೇಶಿ ಜೊತೆಗಾರರು ಸಿಗಬಹುದು. ಹೆಚ್ಚಾಗಿ ಹಣವಂತರಿಗೆ ಮತ್ತು ದೊಡ್ಡ ಉದ್ದಿಮೆದಾರರಿಗೆ ಇದರಿಂದ ಲಾಭವೇ ಹೆಚ್ಚು.  ನೋಡುವುದಕ್ಕೆ ಮಾತು ಕೇಳುವುದಕ್ಕೆ ಇಷ್ಟೆಲ್ಲಾ ಚೆನ್ನಾಗಿರುವಾಗ, ಇದನ್ನು ವಿರೋಧಿಸುವ ಅವಶ್ಯಕತೆ ಕಂಡುಬರುವುದಿಲ್ಲವೆಂಬ ಭಾವನೆ ಮೊದಲ ನೋಟಕ್ಕೆ ಕಂಡು ಬರುವುದು.

ಆದರೆ ಇದು ನಮ್ಮ ದೇಶಕ್ಕೆ ಸರಿಬರುವುದಿಲ್ಲ ಎಂಬುದು ಕೆಲವರ ಚಿಂತನೆ. ವಿಮಾನ, ದೂರ ಸಂಪರ್ಕ, ವಿಜ್ಞಾನ, ವಿಮಾ, ವಿದ್ಯುತ್, ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಒಂದು ಅರ್ಥದಲ್ಲಿ ಸರಿಎನ್ನಬಹುದು. ಆದರೆ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಬಂದರೆ ಅದು ಮೇಲ್ನೋಟಕ್ಕೆ ಮತ್ತು ಮೊದಮೊದಲಿಗೆ ಎಲ್ಲವೂ ಚೆನ್ನಾಗಿದೆ ಎಂದು ಕಂಡುಬಂದರೂ, ನಂತರ ಸ್ವಲ್ಪ ಸಮಯದ ನಂತರ ಇದರ ಪರಿಣಾಮ ಸಾಮಾನ್ಯ ನಾಗರೀಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಘೋರ ಪರಿಣಾಮವುಂಟಾಗುವುದೆಂಬ ಅತಂಕ ಎದ್ದು ಕಾಣುತ್ತದೆ.  

ಮೊದಲಿಗೆ ಚಿಲ್ಲರೆ ವ್ಯಾಪಾರಿಗಳಿಗೆ ಬಹಳ ನಷ್ಟವುಂಟಾಗಿ ಅವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ನಡೆಸಲಾಗದೆ ಮುಚ್ಚಬೇಕಾಗಬಹುದು. ನಮ್ಮ ದೇಶದಲ್ಲಿ ಸುಮಾರು ೫ ಕೋಟಿ ಚಿಲ್ಲರೆ ಅಂಗಡಿಗಳಿವೆ ಎಂದು ಗಣನೆಗೆ ತೆಗೆದುಕೊಂಡರೂ ಮತ್ತು ಅವರ ಸಂಸಾರದಲ್ಲಿ ಸುಮಾರು ೫ ಜನ ಅವಲಂಬಿತರಿದ್ದರೆ ೨೫ ಕೋಟಿ ಜನರ ಬಾಳು ನರಕವಾಗುತ್ತದೆ. ಅವರು ಹೇಳುವ ಪ್ರಕಾರ ೧ ಕೋಟಿ ಹೊಸ ಉದ್ಯೋಗ ಸೃಷ್ಟಿಯಾದರೆ, ೫ ಕೋಟಿ ಜನ ತಮ್ಮ ಕೆಲಸ ಕಳೆದುಕೊಳ್ಳುವರು ಮತ್ತು ಅವರ ಅವಲಂಬಿತರು ಪ್ರತ್ಯೇಕ. (ಮಿಕ್ಕಿದ್ದು ನಾಳೆಗೆ)

Tuesday, 27 November 2012

ವಿದೇಶಿ ನೇರ ಬಂಡವಾಳ: ಭಾಗ-೪


ಕಳೆದ ಸಂಚಿಕೆಯಿಂದ

ಕೇಂದ್ರ ಸರ್ಕಾರಕ್ಕೆ ಮಸೂದೆ ಜಾರಿ ಗೊಳಿಸುವುದು ಅತ್ಯಂತ ಅವಶ್ಯಕವಾಗಿ ಕಾಣುತ್ತಿದೆ. ಈಗಿರುವ ಕೇಂದ್ರ ಸರ್ಕಾರ ವಿದೇಶಿ ಬಂಡವಾಳವನ್ನು ಬೇಡವೆನ್ನುವ ಹಾಗಿಲ್ಲ. ಈಗ ನಾವು ಜಾಗತೀಕರಣದ ಹೊಸಲಿನಲ್ಲಿದ್ದೇವೆ. ಆಗಿನ ಪ್ರಧಾನಿಯಾಗಿದ್ದ ನರಸಿಂಹರಾವ್ ಮತ್ತು ಆಗಿನ ಹಣಕಾಸು ಸಚಿವರಾಗಿದ್ದಂತಹ ಮನಮೋಹನ್ ಸಿಂಗ್ ಜಾಗತೀಕರಣಕ್ಕೆ ಭಾರತವನ್ನು ತೆರೆದುಕೊಂಡಿರುವ ವಿಷಯ ಭಾರತೀಯರಿಗೆ ತಿಳಿದೇ ಇದೆ. ಜಾಗತೀಕರಣದಿಂದ ಭಾರತಕ್ಕೆ ಅನೇಕ ಪ್ರಯೋಜನಗಳಾಗಿರುವುದೂ ಸತ್ಯ. ವಿಶ್ವದ ಎಲ್ಲಾ ದೇಶಗಳೂ ಜಾಗತೀಕರಣಕ್ಕೆ ತಮ್ಮನ್ನು ಒಗ್ಗಿಸಿಕೊಂಡಿವೆ, ಭಾರತವೂ ಅದಕ್ಕೆ ಹೊರತಲ್ಲ. ವಿದೇಶಿ ಸಂಸ್ಥೆಗಳು ನಮ್ಮ ದೇಶದಲ್ಲಿ ಬಂದವಾಳ ತಂದು ವ್ಯಾಪಾರ ಮಾಡುವ ಹಾಗೆಯೇ, ನಮ್ಮ ಭಾರತದ ವ್ಯಾಪಾರಿ ಸಂಸ್ಥೆಗಳು ಇತರೆ ದೇಶದಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿವೆ. ಇಂದು ಯಾವ ದೇಶವೂ ವಿದೇಶಿ ಬಂಡವಾಳ ಬೇಡವೆನ್ನುವ ಹಾಗಿಲ್ಲ. ಕೆಲವು ಉದ್ದಿಮೆಗಳಿಗೆ ಮಾತ್ರ ವಿದೇಶಿ ಬಂಡವಾಳ ಬೇಕು, ಮತ್ತೆ ಕೆಲವುಗಳಿಗೆ ಬೇಡ ಎನ್ನುವ ಹಾಗೂ ಇಲ್ಲದ ಪರಿಸ್ಥಿತಿ ನಮ್ಮದಾಗಿದೆ.

ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಮತ್ತು ಎಲ್ಲಾ ರಾಜ್ಯ/ಕೇಂದ್ರ ಸರ್ಕಾರಕ್ಕೂ ತಿಳಿದ ವಿಷಯ. ಆದರೆ ಇದನ್ನು ಈಗ ವಿರೋಧಿಸುತ್ತಿರುವವರು ತಾವು ಆಡಳಿತ ನಡೆಸುತ್ತಿದ್ದಾಗ ಇದೇ ವಿದೇಶಿ ಬಂಡವಾಳವನ್ನು ಶೇಕಡ ೧೦೦ಕ್ಕೆ ಹೆಚ್ಚಿಸಲು ಪ್ರಯತ್ನಿಸಿದ್ದರು. ಇದೇ ಮಮತಾ ಬ್ಯಾನರ್ಜಿಯವರೂ ಸಹ ವಿದೇಶಿ ಬಂಡವಾಳ ತರುವ ಬಗ್ಗೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು. ಈಗ ಅವರು ವಿರೋದಿಸುತ್ತಿರುವ ಕಾರಣವೇ ಬೇರೆ. ನಮ್ಮ ದೇಶದ ದುರಂತವೆಂದರೆ ವಿರೋಧ ಪಕ್ಷವಾಗಲೀ ಅಥವಾ ಆಡಳಿತ ಪಕ್ಷವೇ ಆಗಲಿ ನಮ್ಮ ದೇಶಕ್ಕ ಬೇಕಾದ ಅಭಿವೃದ್ದಿ ಕೆಲಸಗಳಿಗೆ ತಮಗೆ ತೋಚಿದ ರೀತಿಯಲ್ಲಿ ಮತ್ತು ತಮಗೆ ಅನುಕೂಲವಾದ ರೀತಿಯಲ್ಲಿ ಒಪ್ಪುವುದು ಅಥವಾ ವಿರೋಧಿಸುವುದು. ಇದರಿಂದ ದೇಶಕ್ಕೆ ಮತ್ತು ದೇಶದ ಜನರಿಗೆ ಉಪಯೋಗವಾಗಲೀ ಬಿಡಲಿ ತಮಗೆ ಉಪಯೋಗವಾದರೆ, ಅನುಕೂಲವಾದರೆ ಸಾಕು ಎಂಬುದು. ಇದು ನಮ್ಮ ದೇಶದ ಮತ್ತು ಜನರ ದುರ್ದೈವ. (ಮಿಕ್ಕಿದ್ದು ನಾಳೆಗೆ)

Monday, 26 November 2012

ವಿದೇಶಿ ನೇರ ಬಂಡವಾಳ: ಭಾಗ-೩


ಕಳೆದ ಸಂಚಿಕೆಯಿಂದ

ಚಿಲ್ಲರೆ ಮಾರಾಟ ಕ್ಷೇತ್ರದ ದೈತ್ಯ ವಾಲ್ ಮಾರ್ಟ್ ಎಂಬ ಅಮೇರಿಕಾ ದೇಶದ ಕಂಪನಿ ದೊಡ್ಡ ರೀತಿಯಲ್ಲಿ ನಮ್ಮ ದೇಶಕ್ಕೆ ಬರಲು ತುದಿಗಾಲಲ್ಲಿ ನಿಂತಿದೆ. ಇದರ ಜೊತೆ ಜೊತೆಗೆ ಕೇರ್ ಫೋರ್, ಓಜಾನ್ (ಫ್ರಾನ್ಸ್), ಟೆಸ್ಕೋ (ಬ್ರಿಟನ್) ಮೆಟ್ರೋ (ಜರ್ಮನಿ) ಹೀಗೆ ಅನೇಕ ಕಂಪನಿಗಳು ಭಾರತದ ಒಳಗೆ ಚಿಲ್ಲರೆ ವ್ಯಾಪಾರ ಮಾಡಲು ಕಾದು ಕುಳಿತಿದೆ. ಈ ಕಂಪನಿಗಳು ಕೇವಲ ಒಂದು ಬ್ರಾಂಡಿನ ಉತ್ಪನ್ನವನ್ನು ಮಾತ್ರ ಮಾರಾಟ ಮಾಡುವುದಿಲ್ಲ. ಇವುಗಳು ಮಲ್ಟಿ ಬ್ರಾಂಡ್ ಉತ್ಪನ್ನನಗಳನ್ನು ಮಾರಾಟ ಮಾಡುವ ಸಂಸ್ಥೆಗಳು.  ಚಿಲ್ಲರೆ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಬಂದರೆ ನಮ್ಮ ದೇಶದ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಹೊಸ ರಸ್ತೆಗಳು ಬಂದು ಸಂಚಾರ ಸುಗುಮವಾಗುತ್ತದೆ. ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲೂ ರೈತರು ಬೆಳೆದ ಪದಾರ್ಥಗಳಿಗೆ ಉತ್ತಮ ಶೀತಾಗಾರದ ವ್ಯವಸ್ಥೆಯನ್ನು ವಿದೇಶಿ ವ್ಯಾಪಾರ ಸಂಸ್ಥೆಗಳು ಮಾಡುತ್ತವೆ. ರೈತರಿಂದ ನೇರವಾಗಿ ವ್ಯಾಪಾರ ಸಂಸ್ಥೆಗಳೇ ಖರೀದಿಸುವುದರಿಂದ ಮಧ್ಯವರ್ತಿಗಳ ಕಾಟ ರೈತರಿಗೆ ಇರುವುದಿಲ್ಲ. ರೈತರಿಗೆ ತಾವು ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ದೊರೆಯುತ್ತದೆ. ಉತ್ತಮ ಬೀಜ, ರಸ್ದಗೊಬ್ಬರ, ಹಣಕಾಸಿನ ಅವಶ್ಯಕತೆ ಬಂದಾಗ ವಿದೇಶಿ ವ್ಯಾಪಾರ ಸಂಸ್ಥೆಗಳು ಅವರ ಪರವಾಗಿ ನಿಲ್ಲುತ್ತವೆ. ದೇಶಾದ್ಯಂತ ಮಾರಾಟ ಮಳಿಗೆ ಗಳನ್ನು ತೆಗೆಯುವುದರಿಂದ ಸುಮಾರು ೧ ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ, ಹೀಗೆ ಅನೇಕ ಕನಸುಗಳನ್ನು ಕೇಂದ್ರ ಸರ್ಕಾರ ಬಿತ್ತುತ್ತಿದೆ.

ಇಲ್ಲಿ ಇನ್ನೊಂದು ಮಾತನ್ನು ಗಮನಿಸಬೇಕು. ಕೇಂದ್ರವೇ ಹೇಳುವ ಪ್ರಕಾರ ವಿದೇಶಿ ಬಂಡವಾಳ ಶೇಕಡ ೭೦ ರಷ್ಟು, ಮತ್ತು ಉಳಿದ ೩೦% ಇಲ್ಲೇ ತಯಾರಾದ ಪದಾರ್ಥಗಳನ್ನು ಮಾರಾಟ ಮಾಡಬೇಕೆಂಬುದು. ಅಂದರೆ ಶೇಕಡ ೭೦ ಭಾಗ ಹೊರ ದೇಶದಿಂದ ಬಂದರೆ ಉಳಿದ ಶೇಕಡ ೩೦ ರಷ್ಟು ಭಾಗ ಇಲ್ಲಿಯದ್ದೇ ಎಂದು. ಆದರೆ ಇಲ್ಲಿಯೂ ಕೂಡ ಉಳಿದ ೩೦ರಷ್ಟು ಭಾಗವೂ ಹೊರ ದೇಶದಿಂದ ಬಂದು ಇಲ್ಲಿಯೇ ಪುನ: ಪ್ಯಾಕ್ ಗೊಳ್ಳುವ ಸಾಧ್ಯತೆಗಳೇ ಅಧಿಕ. ಇದನ್ನು ಆಂಗ್ಲ ಭಾಷೆಯಲ್ಲಿ ಸ್ಕ್ರೂ ಡ್ರೈವರ್ ಟೆಕ್ನಾಲಜಿ ಎಂದು ಕರೆಯುತ್ತಾರೆ. 

ವಿದೇಶಿ ವ್ಯಾಪಾರ ಸಂಸ್ಥೆಗಳು ಕೋಟ್ಯಾಂತರ ಹಣವನ್ನು ಇಲ್ಲಿ ಹೂಡಿಕೆ ಮಾಡಿ, ಲಾಭಗಳಿಸುವುದನ್ನು ಬಿಟ್ಟು ಇಲ್ಲಿ ರಸ್ತೆ, ಶೀತಾಗಾರ ವ್ಯವಸ್ಥೆ ಮುಂತಾದವುಗಳನ್ನು ಮಾಡಲು ಹೊರಡುತ್ತದೆಯೇ? ಅವರು ಇಲ್ಲಿಗೆ ಬರುವುದು ಕೇವಲ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಮಾತ್ರ ಎಂಬ ವಾದವೂ ಇದೆ. ಈ ವಾದದಲ್ಲಿ ಸತ್ಯವೂ ಕಾಣುತ್ತಿದೆ. ಭಾರತದ ಚಿಲ್ಲರೆ ಮಾರುಕಟ್ಟೆ ವಿಶ್ವದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ. ಇದನ್ನು ಬಿಡಲು ಯಾವ ದೇಶವೂ ತಯಾರಿಲ್ಲ. ಮುಖ್ಯವಾಗಿ ಅಮೇರಿಕಾ ದೇಶಕ್ಕೆ ಭಾರತದ ಮಾರುಕಟ್ಟೆ ಅತ್ಯಂತ ಪ್ರಿಯ. ಇಲ್ಲಿ ಇನ್ನೊಂದು ವಿಷಯವನ್ನು ಮೊದಲು ಗಮನಿಸಬೇಕು. ಸ್ಥಳೀಯ ಚಿಲ್ಲರೆ ಮಾರಾಟಗಾರರಿಗೆ ತೊಂದರೆಯಾಗುವುದೆಂದು ಅಮೇರಿಕಾ ದೇಶದ ನ್ಯೂಯಾರ್ಕ್ ನಗರದಲ್ಲೇ ಮಾರಾಟ ಮಳಿಗೆ ತೆಗೆಯಲು ಅಲ್ಲಿಯ ಸರ್ಕಾರ ಅವಕಾಶ ಕೊಟ್ಟಿಲ್ಲ. ನಾವು ಅವುಗಳನ್ನು ನಮ್ಮ ಎರಡೂ ಕೈಗಳಿಂದ ಸ್ವಾಗತಿಸುತ್ತಿದ್ದೇವೆ. (ಮಿಕ್ಕಿದ್ದು ನಾಳೆಗೆ)