Thursday 22 November 2012

ಕೂಡಂಗುಲಂ ಅಣು ಸ್ಥಾವರದ “ಅಣು ಕಸ” ಕರ್ನಾಟಕಕ್ಕೆ ಉಡುಗೊರೆ


ಅಣು ವಿದ್ಯುತ್ ಉತ್ಪಾದಿಸಿ ಅದರಿಂದ ದೊರಕುವ ವಿದ್ಯುತ್ ತಮಿಳುನಾಡಿಗೆ, ಆದರೆ ಅದರಿಂದ ಹೊರ ಬರುವ ತ್ಯಾಜ್ಯ ನಮಗೆ? ಇದೆಂಥಾ ನ್ಯಾಯ? ಅದನ್ನು ನಾವೇಕೆ ಭರಿಸಬೇಕು? ಭಾರತೀಯ ಅಣು ವಿದ್ಯುತ್ ನಿಗಮಕ್ಕೆ ತ್ಯಾಜ್ಯವನ್ನು ಪಕ್ಕದ ರಾಜ್ಯಕ್ಕೆ ಹಾಕುವ ಅವಕಾಶವನ್ನು ಕೊಟ್ಟವರು ಯಾರು? ನಮ್ಮ ರಾಜ್ಯ ಸರ್ಕಾರ ನಮ್ಮದೇನೂ ಅಭ್ಯಂತರವಿಲ್ಲವೆಂದು ಹೇಳಿದೆಯೇ? ಅಥವಾ ಅಣುಕಸವನ್ನು ಯಾವ ರಾಜ್ಯಕ್ಕಾದರೂ ಹಾಕುವು ಅವಕಾಶ ನಮ್ಮ ಸಂವಿಧಾನದಲ್ಲಿದೆಯಾ? ನಮ್ಮ ರಾಜ್ಯದ ಶಾಸಕರು, ಮಂತ್ರಿಗಳು, ವಿರೋಧ ಪಕ್ಷದ ಮುಖಂಡರು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಟಿ.ವಿ ವಾಹಿನಿಗಳು, ಮುದ್ರಣ ಮಾಧ್ಯಮ, ಸಾರ್ವಜನಿಕರು, ಕನ್ನಡ ಸಂಘಸಂಸ್ಠೆಗಳು, ರೈತ ಸಂಘ, ವಿದ್ಯಾರ್ಥಿಗಳ, ಕಾರ್ಮಿಕರ ಸಂಘಟನೆಗಳು, ಬುದ್ದಿ ಜೀವಿಗಳು, ಮಠಾಧೀಶರು, ಪರಿಸರ ಪ್ರಿಯರು ಮುಂತಾದವರು ಈಗಲೇ ಎಚ್ಚೆತ್ತುಕೊಳ್ಳಬೇಕು. ಈಗ ನಾವು ಸುಮ್ಮನಿದ್ದು ಬಿಟ್ಟರೆ ಮುಂದೆ ಇತರೆ ರಾಜ್ಯಗಳಲ್ಲಿ ಅಣು ಸ್ಥಾವರಗಳ ಸ್ಥಾಪನೆಯಾಗಿ ಅದರ ಕಸವೂ ನಮ್ಮ ತಲೆಗೆ ಬೀಳುತ್ತದೆ.

ತಮಿಳುನಾಡಿನವರಿಗೇನೋ ವಿದ್ಯುತ್ ಸಿಗುತ್ತದೆ, ನಮಗೇನು ಸಿಗುತ್ತದೆ? ಈ ಅಣು ತ್ಯಾಜ್ಯದಿಂದ ನಮಗೆ ಮತ್ತು ಮುಂದಿನ ಜನಾಂಗಗಳಿಗೆ ಅಪಾಯ ತಪ್ಪಿದ್ದಲ್ಲ. ಈ ಅಣುಕಸ ಅತ್ಯಂತ ಅಪಾಯಕಾರಿ. ಕ್ಯಾನ್ಸರ್, ಚರ್ಮ ರೋಗ, ಅಂಗವಿಕಲತೆ ಹೀಗೆ ನೂರೆಂಟು ರೋಗಗಳ ಬೀಡು ನಮ್ಮ ಕರ್ನಾಟಕವಾಗುತ್ತದೆ. ಅಷ್ಟಲ್ಲದೇ ಮುಂದೆ ಅಣು ಸ್ಥಾವರಗಳ ಬಳಿ ಇರುವ ನಿವಾಸಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಬೇಕಾಗಬಹುದು. ಅವರಿಗೆ ಪರಿಹಾರ ಒದಗಿಸಬೇಕಾಗಬಹುದು. ಆಶ್ರಯ, ಪರಿಹಾರ ಧನ, ಉದ್ಯೋಗ, ಖಾಯಿಲೆಗಳಿಗೆ ಉಚಿತ ಸೇವೆ ಹೀಗೆ ಅನೇಕ ತೊಂದರೆಗಳು ಮುಂದೆ ನಮಗೆ ಇದೆಲ್ಲಾ ಕಾದಿದೆ. ಇವೆಲ್ಲಾ ಕೇವಲ ಒಂದು ತಲೆಮಾರಿಗೆ ಮುಗಿಯುವುದಿಲ್ಲ. ಅನೇಕ ತಲೆಮಾರುಗಳು ಇದಕ್ಕೆ ದಂಡ ತೆರಬೇಕಾಗಬಹುದು. ರಷ್ಯಾದ ಚರ್ನೋಬಿಲ್ ದುರಂತ ನಮ್ಮ ಕಣ್ಣಮುಂದೆಯೇ ಇದೆ. ಕನ್ನಡಿಗರು ಸಹನಾ ಶೀಲರು, ಎಲ್ಲದಕ್ಕೂ ತಲೆ ಆಡಿಸುವವರು ಎಂದು ಕೇಂದ್ರ ಸರ್ಕಾರ ಭಾವಿಸಿದಂತಿದೆ.

ತಮಿಳುನಾಡಿನಲ್ಲಿರುವ ಕೂಡಂಗುಲಂ ಅಣು ಸ್ಥಾವರದ ಅತ್ಯಂತ ಅಪಾಯಕಾರಿಯಾದ “ಅಣು ಕಸ” ವನ್ನು ಕರ್ನಾಟಕದ ಕೋಲಾರ ಜಿಲ್ಲೆಯ ಕೆ.ಜಿ.ಎಫ಼್ ನ ವರ್ಜಿತ ಗಣಿಗಳಲ್ಲಿ ಸುರಿಯುತ್ತೇವೆ ಎಂದು ಭಾರತೀಯ ಅಣು ವಿದ್ಯುತ್ ನಿಗಮ ಸರ್ವೋಚ್ಚ ನ್ಯಾಯಾಲಯದಲ್ಲಿ ತಿಳಿಸಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕಸದಿಂದ ಯಾವುದೇ ಅಪಾಯ ಇಲ್ಲ. ಅಂತ ವಿದ್ಯುತ್ ನಿಗಮವೇನೋ ಹೇಳುತ್ತಿದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಅದು ಬೇರೇನೋ ಹೇಳುತ್ತಿದೆ.

ಇಂದು ಬೆಳಗ್ಗೆ ಸುವರ್ಣ ಟಿ.ವಿಯಲ್ಲಿ ವಿಜ್ಞಾನಿಯಾದ ನಾಗೇಶ್ ಅವರು ಇದರ ಬಗ್ಗೆ ಮಾತನಾಡಿ ಅಣು ತ್ಯಾಜ್ಯದಲ್ಲಿ ದೊರೆಯುವ ಒಂದು ಕೆ.ಜಿ ಪ್ಲುಟೋನಿಯಂ ಭೂಮಿಯಲ್ಲಿ ಕರಗಲು ಸುಮಾರು ಒಂದು ಲಕ್ಷ ಇಪ್ಪತ್ತೆಂಟು ಸಾವಿರ ವರ್ಷವಾಗುತ್ತದೆ. ಒಂದು ಕೆ.ಜಿ. ಪ್ಲುಟೋನಿಯಂ ಅರ್ಧ ಕೆ.ಜಿಯಷ್ಟು ಕರಗಲು ಸುಮಾರು ಇಪ್ಪತ್ತನಾಲ್ಕು ಸಾವಿರದ ಆರುನೂರು ವರ್ಷ ಹಿಡಿಯುತ್ತದೆ. ಆ ಅರ್ಧ ಕೆ.ಜಿ, ಕಾಲು ಕೇಜಿ.ಯಷ್ಟು ಕರಗಲು ಪುನಃ ೨೪,೬೦೦ ವರ್ಷ, ಆ ಕಾಲು ಕೆ.ಜಿ ಅರ್ದದಷ್ಟಾಗಲು ಪುನಃ ೨೪,೬೦೦ ವರ್ಷವಾಗುತ್ತದೆ ಎಂದು ಹೇಳುತ್ತಾರೆ. ಒಂದು ಕೆ.ಜಿ ಅಣುಕಸ ಕರಗುವುದ್ದಕ್ಕೆ ಇಷ್ಟು ವರ್ಷವಾಗಬೇಕಾದರೆ, ಅದರಲ್ಲಿ ಸುರಿಯುವ ಟನ್ ಗಟ್ಟಲೆ ಅಣುಕಸ ಕರಗಲು ಎಷ್ಟು ವರ್ಷಗಳು ಬೇಕಾಗುತ್ತದೆ ಎಂದು ಯೋಚಿಸಿದರೆ ಎದೆ ನಡುಗುತ್ತದೆ. ವಸ್ತುಸ್ಥಿತಿ ಹೀಗಿರಬೇಕಾದರೆ ಯಾಕೆ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ? ಇವೆಲ್ಲಾ ನಮ್ಮ ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲವೇ? ಅಥವಾ ಗೊತ್ತಿದ್ದೂ ಕಣ್ಣುಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದಾರೆಯೇ? ಇದನ್ನು ಎಲ್ಲಾ ಕನ್ನಡಿಗರು ಪ್ರತಿಭಟಿಸಲೇಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ. ಅದು ಹಾಗಾಗದಿರಲಿ ಎಂಬ ಬಯಕೆಯಿಂದ………….


No comments:

Post a Comment