Thursday 29 November 2012

ವಿದೇಶಿ ನೇರ ಬಂಡವಾಳ: ಭಾಗ-೬


ಕಳೆದ ಸಂಚಿಕೆಯಿಂದ

ಇನ್ನು ರೈತರಿಗೆ ಬಹಳ ದೊಡ್ಡ ಹೊಡೆತ ಎಂದರೆ, ವಿದೇಶಿ ಸಂಸ್ಥೆ ಹೇಳಿದ ಪದಾರ್ಥಗಳನ್ನೇ ಅವರು ಬೆಳೆಯಬೇಕಾಗಬಹುದು ಮತ್ತು ಅದನ್ನು ಅವರಿಗೆ ಮಾರಬೇಕು. ಇತರರಿಗೆ ಮಾರುವಂತಿಲ್ಲ. ಯಾಕೆಂದರೆ ಅವರಿಗೆ ಬೀಜ, ರಸಗೊಬ್ಬರ, ಬೇಕಾದಾಗ ಹಣ ಕಾಸಿನ ನೆರವನ್ನು ಒದಗಿಸಿ ಅವರಿಂದ ಒಂದು ಒಪ್ಪಂದವನ್ನು ಮಾಡಿಕೊಂಡಿರ ಕೊಂಡಿರಲಾಗುತ್ತದೆ. ಅವರು ಬೆಳೆದ ಎಲ್ಲಾ ಬೆಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವರಿಗೆ ಬೇಕಾದಂತಹುದ್ದನ್ನೇ ಆಯ್ಕೆ ಮಾಡಿ ಉಳಿದವನ್ನು ರೈತರ ತಲೆಗೆ ಕಟ್ಟುವ ಸಾಧ್ಯತೆಗಳು ಕಾಣಬರುತ್ತದೆ. ಉದಾಹರಣೆಗೆ ೧ ಟನ್ ಟಮೇಟೊ ಹಣ್ಣಿನಲ್ಲಿ ಸುಮಾರು ಕಾಲು ಭಾಗವನ್ನಷ್ಟೆ ತೆಗೆದುಕೊಂಡು ಉಳಿದ ಮುಕ್ಕಾಲು ಭಾಗವನ್ನು ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬ ಕಾರಣ ಒಡ್ಡಿ ತೆಗೆದುಕೊಳ್ಳದೆ ಇರಬಹುದು. ಆಗ ರೈತ ಉಳಿದ ಮುಕ್ಕಾಲು ಭಾಗವನ್ನು ಏನು ಮಾಡಬೇಕು? ರೈತ ಎಲ್ಲದಕ್ಕೂ ಕಂಪನಿಗಳ ಮರ್ಜಿಯಲ್ಲೇ ಇರಬೇಕಾಗುತ್ತದೆ. ಭೂಮಿಯ ಒಡೆಯತಾನಾದರೂ, ತನ್ನ ಭೂಮಿಯಲ್ಲೇ ಕೆಲಸಗಾರನಂತೆ ದುಡಿಯಬೇಕಾಗಬಹುದು. ರೈತ ಕಾಲ ಕ್ರಮೇಣ ಪರಾವಲಂಬಿಯಾಗುವುದು ಜಾಸ್ತಿಯಾಗುತ್ತದೆ.

ಸಾಮಾನ್ಯ ನಾಗರೀಕರಿಗೆ ಮೊದಮೊದಲು ತಾವು ಕೊಳ್ಳುವ ಪದಾರ್ಥಗಳ ಬೆಲೆ ಸ್ವಲ್ಪ ಕಡಿಮೆಯಂತೆ ಕಂಡು ಬಂದರೂ ದಿನ ಕಳೆದಂತೆ ಅವರು ಹೊಸ ದರವನ್ನು ತಮ್ಮಿಷ್ಟಕ್ಕೆ ತಕ್ಕಂತೆ ಹೆಚ್ಚು ಮಾಡುವು ಸಾಧ್ಯತೆಗಳಿವೆ. ಜನರಿಗೆ ಬೇರೆ ಆಯ್ಕೆಗಳು ಇರುವುದೇ ಇಲ್ಲ. ಚಿಲ್ಲರೆ ಅಂಗಡಿಗಳ ಬದಲಿಗೆ ಇಂತಹ ಸೂಪರ್ ಬಜಾರ್, ದೊಡ್ಡ ಮಾಲ್ ಗಳಲ್ಲಿಯೇ ಜನರು ತಮಗೆ ಬೇಕಾದ ಪದಾರ್ಥಗಳನ್ನು ಖರೀದಿಸಬೇಕಾಗಬಹುದು. ಎಲ್ಲೆಲ್ಲೂ ಮಾಲ್ ಸಂಸ್ಕೃತಿ ಉದಯವಾಗಬಹುದು. ಇದು ಕೇವಲ ನಗರ ಪ್ರದೇಶಗಳನ್ನಷ್ಟೇ ಅಲ್ಲದೆ ಜಿಲ್ಲಾ ಕೆಂದ್ರಗಳಲ್ಲೂ ತಲೆಯೆತ್ತಬಹುದು. ನಮ್ಮಲ್ಲಿ ಸ್ವವಲಂಬನೆ ಎಂಬುದು ಬತ್ತಿಹೋಗಿ ಎಲ್ಲದ್ದಕ್ಕೂ ಇಂತಹ ದೊಡ್ಡ ಕಂಪನಿಗಳ ಆಶ್ರಯದಲ್ಲೇ ಬದುಕಬೇಕಾಗಬಹುದು. ದೊಡ್ದ ಮೀನು ಚಿಕ್ಕ ಚಿಕ್ಕ ಮೀನುಗಳನ್ನು ಸ್ವಾಹ ಮಾಡುವಂತೆ ಇಂತಹ ದೊಡ್ಡ ಕಂಪನಿಗಳು ಚಿಕ್ಕಿ ಪುಟ್ಟ ಅಂಗಡಿಗಳನ್ನು ನುಂಗಿಬಿಡುವ ಸಾಧ್ಯತೆಗಳು ಕಾಣಬರುತ್ತದೆ. ಹೀಗೆ ಅನೇಕ ಅನುಮಾನಗಳು ಕಾಡುತ್ತವೆ. ಇದಕ್ಕೆ ಕಾಲವೇ ಉತ್ತರಿಸಬೇಕೇನೋ? (ಮುಗಿಯಿತು)

No comments:

Post a Comment