Saturday 10 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೭


ಕಳೆದ ಸಂಚಿಕೆಯಿಂದ

“ನೋಡ್ರಯ್ಯಾ, ನೀವು ಯಂಗ್ ಸ್ಟರ್ಸ್ ಲೈಫಲ್ಲಿ ಮುಂದೆ ಬರ್ಬೇಕು. ಫೇಸ್ ಬುಕ್ ಯಾರೊ ಫುಣ್ಯಾತ್ಮ ಮಾಡಿದಾನೆ. ನೀವುಗಳು ಅದನ್ನು ಸರಿಯಾದ ರೀತಿಯಲ್ಲಿ ಬಳ್ಸ್ಕೊಳಿ. ಅದನ್ನು ಫೇಕ್ ಬುಕ್ ಮಾಡ್ಬೇಡಿ. ಸಮಾಜವನ್ನು ಎಚ್ಚರಿಸಿ, ತಿದ್ದಿ, ನಿಮ್ಮ ಬುದ್ದಿಶಕ್ತಿಯನ್ನು ಎಲ್ಲರೊಂದಿಗೆ ಹಂಚ್ಕೊಳಿ. ನಮ್ಮ ದೇಶ್ದಲ್ಲಿ ಎಷ್ಟೊಂದು ಪ್ರಾಬ್ಲಂ ಇದೆ. ಅದು ನಿಮಗೂ ಗೊತ್ತು. ಅದನ್ನು ಸಾಧ್ಯ ಆದ್ರೆ ಸರಿಪಡಿಸಿ. ಸಮಾಜಕ್ಕೆ ಸಾಧ್ಯವಾದಷ್ಟು ಏನಾದರೂ ಒಳ್ಲೆಯದನ್ನು ಮಾಡಿ, ನೀವು ವಿದ್ಯಾವಂತ್ರು, ಬುದ್ದಿವಂತ್ರು ನೀವೇ ಹೀಗ್ಮಾಡಿದ್ರೆ ಹೇಗಯ್ಯಾ?” ಅಂತ ಪುನಃ ಏನೋ ಹೇಳಕ್ಕೆ ಹೊರಟ್ರು. ಸಾವಿತ್ರಮ್ಮ “ರೀ, ಸಾಕ್ಮಾಡ್ರಿ, ಪಾಪ ಯಾರೋ ಸಿಕ್ಕಿದ್ರು ಅಂತ ಅವ್ರ ತಲೆ ತಿಂತಾ ಇದೀರಾ ಆವಾಗಿನಿಂದ, ಸ್ವಲ್ಪವೂ ಪುರುಸೊತ್ತು ಕೊಡದೆ. ನೀವು ಬಿಟ್ರೆ ಸಾಕು ಅಂತ ಅವರು ಕಾಯ್ತಾ ಇದ್ದಾರ್ರೆ ಓಡಕ್ಕೆ” ಅಂತ ತಮಾಷೆ ಮಾಡಿದ್ರು. “ಇಲ್ಲಾ ಆಂಟಿ, ಅಂಕಲ್ ಹೇಳ್ತಾ ಇರೋದು ಸರಿಯಾಗೇ ಇದೆ” ಅಂದ ನಾಗರಾಜ. ರಾಜಲಕ್ಷ್ಮಿ ಹೌದೆಂದು ತಲೆಯಾಡಿಸಿದಳು.

“ಸರಿ, ಹೊತ್ತಾಯ್ತು ನಡೀರಿ ಮನೆಗೆ. ನಾನು ಕಾರ್ ಹೊರಗೆ ತೆಗೀತೀನಿ. ನೀನೂ ಬಾರೆ ಅವರಿಬ್ಬರನ್ನು ಡ್ರಾಪ್ ಮಾಡಿ ಬರೋಣ” ಅಂತ ಮೇಲೆದ್ರು ರಾಮರಾಯರು. ಎಲ್ಲರೂ ಕಾರಿನಲ್ಲಿ ಕುಳಿತುಕೊಂಡ ರಾಮರಾಯರ ಕಾರು ಬನಶಂಕರಿ ಕಡೆ ಹೊರಟಿತು. ಮಧ್ಯದಲ್ಲಿ ರಾಜಲಕ್ಷ್ಮಿ “ಆಂಟಿ ಈಗ ನಿಮ್ಮ ವಿಷ್ಯ ಹೇಳಿ” ಅಂದ್ಲು. ನಮ್ಮದೇನಿದಮ್ಮಾ ಅಂಕಲ್ ಎಲ್ಲಾ ಹೇಳಿದ್ರಲ್ಲಾ ಆಷ್ಟೇ. ನಮಗೆ ಮದ್ವೆ ಆಗಿ ಮುಂದಿನ ತಿಂಗಳ ೧೫ನೇ ತಾರೀಖಿಗೆ ಕರೆಕ್ಟಾಗಿ ೫೦ ವರ್ಷ ಆಗತ್ತೆ, ನಮಗೆ ಇಬ್ಬರು ಮಕ್ಕಳು, ಇಬ್ಬರಿಗೂ ಮದ್ವೆ ಆಗಿದೆ. ಅವರಿಗೂ ಎರೆಡೆರೆಡು ಮಕ್ಕಳು. ಅಮೇರಿಕಾದಲ್ಲಿ ಮಗ, ಸೊಸೆ ಇದ್ದಾರೆ.  ಇಬ್ಬರೂ ಕಂಪ್ಯೂಟರ್ ಇಂಜಿನಿಯರ್ ಆಗಿದ್ದಾರೆ. ಮಗಳು, ಅಳಿಯ ಇಬ್ಬರೂ ಇಂಗ್ಲೇಂಡಿನಲ್ಲಿ ಡಾಕ್ಟರ್ ಆಗಿದ್ದಾರೆ. ವರ್ಷಕ್ಕೊಂದು ಸಾರಿ ಬರ್ತಾರೆ. ಒಂದು ತಿಂಗಳಿದ್ದು ಹೊರಟುಬಿಡ್ತಾರೆ. ಮುಂದಿನ ತಿಂಗಳು ನಮ್ಮ ಆನಿವರ್ಸರಿಗೆ ಬರ್ತಾಇದ್ದಾರೆ. ಈ ಸಲ ಮಗನ ಜೊತೆ ನಾವಿಬ್ಬರೂ ಅಮೇರಿಕಾಕ್ಕೆ ಹೊರಟುಬಿಡ್ತೀವಿ. ಅವರ ಜೋತೆನೇ ಇರ್ತೀವಿ. ಮಕ್ಕಳು ಮೊಮ್ಮಕ್ಕಳ ಜೊತೆ ಇರೋ ಆಸೆ ಆಗಿದೆ. ನೀವಿಬ್ಬರೂ ಬನ್ನಿ ಫಂಕ್ಷನ್ಗೆ , ನಿಮ್ಗೆ ಫೋನ್ ಮಾಡ್ತೀನಿ” ಅಂದ್ರು. ನಾಗರಾಜ್ “ಅಂಕಲ್ ನಿಮ್ಮ ಮಗ ಇನ್ಸ್ಪೆಕ್ಟರ್ ಅಂದ್ರಿ ಮತ್ತೇ” ಅಂದ. “ಹಾ, ಅವನು ನನ್ನ ತಮ್ಮನ ಮಗ ಅಶೋಕ್ ಅಂತ, ಇಲ್ಲೇ ಜಯನಗರದಲ್ಲಿ ಇನ್ಸ್ಪೆಕ್ಟರ್ ಆಗಿದ್ದಾನೆ. ನಮ್ಮ ಮನೆಯ ಪಕ್ಕದಲ್ಲೇ ನನ್ನ ತಮ್ಮನ ಮನೆ ಇರೋದು. ನನ್ನ ತಮ್ಮ, ಅವನ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಎಲ್ಲಾ ಇಲ್ಲೇ ಇದ್ದಾರೆ. ಹಾಗಾಗಿ ನಮ್ಗೇನೂ ತೊಂದ್ರೆ ಆಗಿಲ್ಲ. ಬೆಳಗಿನಿಂದ ಸಾಯಂಕಾಲದ ತನ್ಕ ಟೈಮ್ ಹೇಗೋ ಹೊರಟುಹೋಗತ್ತೆ” ಅಂದ್ರು. ರಾಜಲಕ್ಷ್ಮಿಯನ್ನು ಬನಶಂಕರಿ ದೇವಸ್ತಾನದ ಹತ್ತಿರವಿರುವ ಮನೆಗೆ ಡ್ರಾಪ್ ಮಾಡಿ, ನಾಗರಾಜನನ್ನು ಕುಮಾರ ಸ್ವಾಮಿ ಲೇಔಟ್ ಹತ್ರ ಅವನ ಮನೆ ಹತ್ರ ಡ್ರಾಪ್ ಮಾಡಿ “ಇಬ್ಬರೂ ಮನೆ ಕಡೆ ಆಗಾಗ ಬರ್ತಾ ಇರಿ, ಹಾಗೆ ಆನಿವರ್ಸರಿಗೆ ಕೂಡಾ ಬನ್ನಿ, ಫೋನ್ ಮಾಡ್ತೀನಿ, ನಿನ್ನ ನಂಬರ್ ಕೊಡು” ಅಂತ ನಾಗರಾಜನ ಮೊಬೈಲ್ ನಂಬರ್ ತಗೊಂಡು ಮನೆ ಕಡೆ ತಮ್ಮ ಕಾರನ್ನು ತಿರುಗಿಸಿದರು ರಾಮರಾಯರು.

“ಮೊದಲು ನಾಳೆ ನಾಗರಾಜ ನನ್ನ ಹೆಸ್ರಲ್ಲಿ, ಇವಳ ಹೆಸ್ರಲ್ಲಿ ಕ್ರಿಯೇಟ್ ಮಾಡಿದ ಫೇಕ್ ಅಕೌಂಟ್ ತೆಗೆದುಹಾಕಬೇಕು. ನನ್ನ ಹೆಸ್ರಲ್ಲಿ ಒಂದು ಹೊಸ ಅಕೌಂಟ್ ಓಪನ್ ಮಾಡಿ ಅದ್ರಲ್ಲಿ ನನ್ನ ಇಷ್ಟು ವರ್ಷದ ಅನುಭವಗಳನ್ನು ಜನರ ಜೊತೆ ಹಂಚ್ಕೋಬೇಕು, ಬೇರೆಯವರ ಅಭಿಪ್ರಾಯಗಳನ್ನು ತಿಳ್ಕೋಬೇಕು. ಅಪ್ಡೇಟ್ ಆಗಬೇಕು, ಪ್ರಪಂಚ ದಿನವೂ ಬೆಳೀತಿದೆ. ಹೊಸ ಹೊಸ ವಿಷ್ಯ ತಿಳ್ಕೋಳ್ಳೋದು ತುಂಬಾ ಇದೆ, ಬ್ಲಾಗ್ ಬಗ್ಗೆನೂ ನಾಗರಾಜಂಗೆ ಕೇಳ್ಬೇಕು” ಅಂತ ತಮ್ಮ ಕಾರನ್ನು ಡ್ರೈವ್ ಮಾಡುತ್ತಾ ರಾಮರಾಯರು ಯೋಚಿಸುತ್ತಿದ್ದರು. ಸಾವಿತ್ರಮ್ಮನವರು ಇದಾವುದರ ಪರಿವೆಯೇ ಇಲ್ಲದೆ ಮನದಲ್ಲೇ ದೇವರನಾಮ ಗುನುಗುತ್ತಿದ್ದರು. ಈ ಕಡೆ ನಾಗರಾಜ ಮತ್ತು ರಾಜಲಕ್ಷ್ಮಿ “ಅಂಕಲ್ ಹೇಳಿದ್ದು ಕರೆಕ್ಟ್. ನಾಳೆಯಿಂದ ಹೊಸ ಜೀವನ ಸ್ಟಾರ್ಟ್ ಮಾಡ್ಬೇಕು. ಮೊದಲು ನಾಳೆ ನಮ್ಮ ಫೇಕ್ ಅಕೌಂಟ್ ಡಿಲೀಟ್ ಮಾಡಿ ಹೊಸ ಅಕೌಂಟ್ ನಮ್ಮ ಹೆಸರಿನಲ್ಲಿ, ನಮ್ಮದೇ ಫೋಟೊದೊಂದಿಗೆ ಓಪನ್ ಮಾಡಬೇಕು, ಅಂಕಲ್ ಹೇಳಿದಂಗೆ ನಾವು ನಮಗೆ ಮಾತ್ರ ಮೋಸ ಮಾಡಿಕೊಳ್ಳಲಿಲ್ಲ, ನಮ್ಮ ಕಾಗೆ ಗೂಪ್ ಫೇಸ್ ಫ್ರೆಂಡ್ಸ್ ಗೂ ಮೋಸ ಮಾಡಿದ್ವಿ. ಅವ್ರನ್ನ ಸಾರಿ ಕೇಳ್ಬೇಕು” ಅಂತ ರಾತ್ರಿ ಮಲಗುವಾಗ ಯೋಚಿಸುತ್ತಿದ್ದದ್ದು ಕೇವಲ ಕಾಕತಾಳಿಯವಿರಲಾರದು. (ಮುಗಿಯಿತು)

No comments:

Post a Comment