Thursday 8 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೫


ಕಳೆದ ಸಂಚಿಕೆಯಿಂದ

ನೋಡಿ ಅಂಕಲ್, ಈಗ ನಿಮ್ಮ ಅಕೌಂಟಿಂದ ಆಂಟಿಗೆ, ನನಗೆ, ಈ ಕೋತಿಗೆ, ಎಲ್ಲರಿಗೂ ಫ್ರೆಂಡ್ ರಿಕ್ವೆಸ್ಟ್ ಕೊಡ್ತೀನಿ, ಹಾಗೇ ಆಂಟಿ ಅಕೌಂಟ್ ಇಂದ ನಮ್ಮೆಲ್ಲರಿಗೂ. ಈಗ ನನ್ನ ಅಕೌಂಟಿಂದ ನಿಮಗೆ, ಆಂಟಿಗೆ ರೆಕ್ವೆಸ್ಟ್ ಕನ್ಫರ್ಮ್ ಮಾಡ್ದೆ. ಈಗ ನಾವು ಮೂವರೂ ಫೇಸ್ ಬುಕ್ ಫ್ರೆಂಡ್ಸ್. ನಾನು ನಿಮ್ಮನ್ನ, ಆಂಟಿನ್ನ ಕಾಗೆ ಗ್ರೊಪ್ ಗೆ ಜಾಯಿನ್ ಮಾಡ್ತೀನಿ. ನೀವು ಈಗ ಈ ಕಾಗೆ ಗ್ರೂಪ್ ನಲ್ಲಿ ಇರುವ ಎಲ್ಲರಿಗೂ ಫ್ರೆಂಡ್ ರ್ರಿಕ್ವೆಸ್ಟ್ ಕಳ್ಸಿದ್ರೆ. ಅವರು ನಿಮಗೆ ಫ್ರೆಂಡ್ ಆಗಿ ಕನ್ಫರ್ಮ್ ಮಾಡ್ತಾರೆ.” ಹೀಗೆ ಇದು ವರ್ಕ ಆಗೋದು.” ಅಂತ ವಿವರಣೆ ಕೊಟ್ಟ.

“ಸರಿ ಈಗ ಏಳಿ, ಮೊದಲು ಊಟ ಮಾಡಿ ನಂತ್ರ ನೋಡೋಣ ಮಿಕ್ಕಿದೆಲ್ಲಾ ಅಂತ ಎಲ್ಲರನ್ನೂ ಊಟಕ್ಕೆ ಎಬ್ಬಿಸಿದ್ರು ಸಾವಿತ್ರಮ್ಮನವರು. ಊಟದ ಟೇಬಲ್ಲಿನ ಮೇಲೆ ಕುಳಿತು ರಾಮರಾಯರು “ನನಗೆ ಇನ್ನೊಂದು ಡೌಟು, ನಿನಗೆ ರಾಜಲಕ್ಷ್ಮಿ, ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುವ ವಿಷಯ ಹೇಗೆ ಗೊತ್ತು, ಹಾಗೆ ನೀನು ಹೋಟ್ಲಲ್ಲಿ ಕೆಲಸ ಮಾಡುವ ವಿಷ್ಯ ರಾಜಲಕ್ಷ್ಮಿಗೆ ಹೇಗೆ ಗೊತ್ತಾಯ್ತು?” ಎಂದು ಇಬ್ಬರನ್ನೂ ನೊಡ್ತಾ ಕೇಳಿದ್ರು. ಇಬ್ಬರೂ ಮುಖ ಮುಖ ನೋಡ್ಕೊಂಡು “ಅದು ಇನ್ನೊಂದು ಕಥೆ” ಅಂದ್ಲು ರಾಜಲಕ್ಷ್ಮಿ. “ನಿಮ್ಮ ಕಥೆಯಲ್ಲಿ ಇನ್ನೊಂದು ಟ್ವಿಸ್ಟಾ?” ಅಬ್ಬಾ ಅದೇನು ಹುಡುಗ್ರೋ ನೀವು, ಅದನ್ನೂ ಹೇಳ್ಬಿಡಿ. ಕೇಳಿ ನಮ್ಮ ಕಿವಿ ಪಾವನವಾಗ್ಲಿ” ಅಂದ್ರು ಸಾವಿತ್ರಮ್ಮನವರು. “ಏನಿಲ್ಲ ಚಿಕ್ದಾಗಿ ಹೇಳಿಬಿಡ್ತೀನಿ, ನಾವು ಫೇಸ್ ಬುಕ್ ನಲ್ಲಿ ಪರಿಚವಾಗುವ ಮೊದಲೇ ನಮ್ಮಿಬ್ಬರಿಗೆ ಮೊದಲು ಪರಿಚಯವಿತ್ತು. ಇಬ್ಬರೂ ಒಂದೇ ಬಸ್ಸಿನಲ್ಲಿ ಓಡಾಡುತ್ತಿದ್ವಿ. ಅಲ್ಲೇ ಇವನ ಪರಿಚಯವಾಯ್ತು. ಮೊದಲು ಸ್ನೇಹವಾಗಿ, ನಂತ್ರ ಪ್ರೀತಿ ಕೂಡ ಆಯ್ತು. ಹೀಗೆ ೫-೬ ತಿಂಗಳಾದ ಮೇಲೆ ನಾನೇ ಇವ್ನಿಂದ ದೂರಾಗಿಬಿಟ್ಟೆ”. ಅಂತ ಚಿಕ್ಕದಾಗಿ ವಿವರಣೆ ಕೋಟ್ಲು.

“ಯಾಕೆ ದೂರಾಗಿ ಬಿಟ್ಟೆ” ಅಂತ ರಾಮರಾಯರು ಕೇಳಿದರು. “ಅಂಕಲ್, ಮೊದ್ಲು ಇವನಿಗೆ ಸರ್ಯಾದ ಕೆಲ್ಸ ಇಲ್ಲ. ಸುಳ್ಳು ಹೇಳೋದು ಜಾಸ್ತಿ, ಜಾಸ್ತಿ ಏನು, ಬರೀ ಸುಳ್ಳೇ ಹೇಳ್ತಾನೆ. ಇವನಿಗೆ ತಂದೆ ಇಲ್ಲ, ಇರೋ ತಂಗೀಗೆ ಇವನೇ ಮದುವೆ ಮಾಡ್ಬೇಕು. ಇವನಿಗೆ ಸ್ವಂತ ಮನೆ ಕೂಡ ಇಲ್ಲ. ಇರೋದು ಬಾಡಿಗೆ ಮನೆ. ಇವನು ತನ್ನ ಎಲ್ಲಾ ಪ್ರಾಬ್ಲಂ ಸಾಲ್ವ್ ಮಾಡಿಕೊಳ್ಳೂವ ಹೊತ್ತಿಗೆ ನನ್ನ ಕಥೆ ಏನು? ನನಗೆ ನನ್ನದೇ ಆದ ಕನಸುಗಳಿವೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗ ಬೇಕು. ಅವನಿಗೆ ಒಳ್ಳೆಯ ಕೆಲಸವಿರಬೇಕು ಅಥವಾ ಅವನು ಏನಾದರೂ ಬ್ಯುಸಿನೆಸ್ ಮಾಡ್ತಾ ಇರಬೇಕು. ಸ್ವಂತ ಮನೆ, ಓಡಾಡಲು ಒಂದು ಕಾರು, ಮನೆ ಕೆಲಸಕ್ಕೆ ಜನ ಹೀಗಿರಬೇಕು. ಇವನ ಸಂಬಳಕ್ಕೆ ಇವೆಲ್ಲಾ ಸಾಧ್ಯಾನಾ? ಹೇಳಿ ಅಂಕಲ್ ನೀವೆ? ಅದಕ್ಕೆ ಅವನ್ನ ಡಂಪ್ ಮಾಡಿಬಿಟ್ಟೆ ಅಂದ್ಲು. “ಡಂಪ್ ಅಂದ್ರೆ ಏನು?” ಅಂತ ಕೇಳಿದ್ರು ರಾಮರಾಯರು. “ಡಂಪ್ ಅಂದ್ರೆ ಬಿಟ್ಟಾಕ್ದೆ ಅಂದ್ಕೊಳಿ” ಅಂದ್ಲು ರಾಜಲಕ್ಷ್ಮಿ.

“ಏನೋಮ್ಮಾ, ಇವೆಲ್ಲಾ ನಮ್ಮ ಕಾಲದಲ್ಲಿ ಇರಲಿಲ್ಲ, ನಂಗೆ ಇವ್ರ ಜೊತೆ ಮದ್ವೆ ಆದಾಗ ನಾನು ಇವರ ಫೋಟೊ ಕೂಡ ನೋಡಿರಲಿಲ್ಲ. ಇವ್ರೂ ಆಷ್ಟೇ ನನ್ನ ಫೋಟೋ ಕೂಡ ನೋಡಿರಲಿಲ್ಲವಂತೆ. ಈಗ ನೋಡಿ ನಮ್ಮ ಮದ್ವೆ ಆಗಿ ೫೦ ವರ್ಷ ಆಯ್ತು ಅಂತ ಹೆಮ್ಮೆಯಿಂದ ಹೇಳ್ಕೊಂಡ್ರು ಸಾವಿತ್ರಮ್ಮನವರು. ಅದು “ನಿಮ್ಮ ಕಾಲ ಅಂಟಿ, “ಇದೆಲ್ಲಾ ಈಗ ಮಾಮೂಲು. ಈ ಕಾಲ್ದಲ್ಲಿ ಯಾರೂ ತಲೆ ಕೇಡಿಸ್ಕೊಳಲ್ಲಾ ಇಂಥ ಚಿಕ್ಕ ವಿಷ್ಯಕ್ಕೆ” ಅಂದ್ಲು. “ಇದು ನಿಮಗೆ ಚಿಕ್ಕ ವಿಷ್ಯ, ಮಾಮೂಲು. ನಮ್ಮಂತಹವರಿಗೆ ಹೊಸದು. ಸರಿ ಆಮೇಲೆ ಏನಾಯ್ತು? ಅಂದ್ರು ಸಾವಿತ್ರಮ್ಮ. “ಈಗ ನಾನು ಹೇಳ್ತೀನಿ ಇವರ ಕಥೆ, ನಂಗೀಗ ಎಲ್ಲವೂ ಅರ್ಥವಾಯಿತು, ರಾಜಲಕ್ಷ್ಮಿ, ಸತೀಶ ಇಬ್ಬರೂ ಫೇಸ್ ಬುಕ್ ನಲ್ಲಿ ಅವರವರ ಫೋಟೊ ಹಾಕಿಕೊಳ್ಳದೆ ಬೇರೆ ಯಾರದೋ ಫೋಟೋ ಹಾಕಿಕೊಂಡಿದ್ದಾರೆ. ನಾಗರಾಜ “ದರ್ಶನ್” ಆಗಿ, ರಾಜಲಕ್ಷ್ಮಿ ರಮ್ಯಾ” ಆಗಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ಕೊಂಡಿದ್ದಾರೆ. ಆಮೇಲೆ ಅದ್ರಲ್ಲಿ ಇವರಿಬ್ಬರೇ ತಿರುಗಾ ಪ್ರೆಂಡ್ಸ್ ಆಗಿ, ಒಬ್ಬರನ್ನೊಬ್ಬರು ನೋಡ್ದೆ ಪ್ರೀತಿ ಮಾಡ್ಕೊಂಡು, ಇವತ್ತು ಲಾಲ್ ಭಾಗಿ ನಲ್ಲಿ ಇಬ್ಬರೂ ಭೇಟಿ ಆಗಿದ್ದಾರೆ. ನಾಗರಾಜಾನೇ “ದರ್ಶನ್” ಅಂತ ರಾಜಲಕ್ಷಿಗೂ, “ರಮ್ಯಾನೇ” ರಾಜಲಕ್ಷ್ಮಿ ಅಂತ ನಾಗರಾಜನ್ಗೂ ಇವತ್ತೇ ಗೊತ್ತಾಗಿರೋದು. ಅದಕ್ಕೆ ನೀನು ನಂಗೆ ಮೋಸ ಮಾಡಿದ್ದು, ನೀನು ನಂಗೆ ಮೋಸ ಮಾಡಿದ್ದು ನಲ್ಲಿ ಕಿತ್ತಾಡ್ತಾ ಇದ್ದಿದ್ದು. ಅಲ್ವಾ” ಅಂತ ರಾಜಲಕ್ಷ್ಮಿಯನ್ನು ಕೇಳಿದ್ರು.  “ಹೌದು ಅಂಕಲ್ ಹೇಳ್ತಿರೋದು ಕರೆಕ್ಟ್” ಅಂದ್ಲು ರಾಜಲಕ್ಷ್ಮಿ. ಸಾವಿತ್ರಮ್ಮನಿಗೆ ಈಗ ವಿವರವಾಗಿ ಎಲ್ಲಾ ಅರ್ಥವಾಗಿತ್ತು. (ಮಿಕ್ಕಿದ್ದು ನಾಳೆಗೆ)

No comments:

Post a Comment