Monday 26 November 2012

ವಿದೇಶಿ ನೇರ ಬಂಡವಾಳ: ಭಾಗ-೩


ಕಳೆದ ಸಂಚಿಕೆಯಿಂದ

ಚಿಲ್ಲರೆ ಮಾರಾಟ ಕ್ಷೇತ್ರದ ದೈತ್ಯ ವಾಲ್ ಮಾರ್ಟ್ ಎಂಬ ಅಮೇರಿಕಾ ದೇಶದ ಕಂಪನಿ ದೊಡ್ಡ ರೀತಿಯಲ್ಲಿ ನಮ್ಮ ದೇಶಕ್ಕೆ ಬರಲು ತುದಿಗಾಲಲ್ಲಿ ನಿಂತಿದೆ. ಇದರ ಜೊತೆ ಜೊತೆಗೆ ಕೇರ್ ಫೋರ್, ಓಜಾನ್ (ಫ್ರಾನ್ಸ್), ಟೆಸ್ಕೋ (ಬ್ರಿಟನ್) ಮೆಟ್ರೋ (ಜರ್ಮನಿ) ಹೀಗೆ ಅನೇಕ ಕಂಪನಿಗಳು ಭಾರತದ ಒಳಗೆ ಚಿಲ್ಲರೆ ವ್ಯಾಪಾರ ಮಾಡಲು ಕಾದು ಕುಳಿತಿದೆ. ಈ ಕಂಪನಿಗಳು ಕೇವಲ ಒಂದು ಬ್ರಾಂಡಿನ ಉತ್ಪನ್ನವನ್ನು ಮಾತ್ರ ಮಾರಾಟ ಮಾಡುವುದಿಲ್ಲ. ಇವುಗಳು ಮಲ್ಟಿ ಬ್ರಾಂಡ್ ಉತ್ಪನ್ನನಗಳನ್ನು ಮಾರಾಟ ಮಾಡುವ ಸಂಸ್ಥೆಗಳು.  ಚಿಲ್ಲರೆ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಬಂದರೆ ನಮ್ಮ ದೇಶದ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಹೊಸ ರಸ್ತೆಗಳು ಬಂದು ಸಂಚಾರ ಸುಗುಮವಾಗುತ್ತದೆ. ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲೂ ರೈತರು ಬೆಳೆದ ಪದಾರ್ಥಗಳಿಗೆ ಉತ್ತಮ ಶೀತಾಗಾರದ ವ್ಯವಸ್ಥೆಯನ್ನು ವಿದೇಶಿ ವ್ಯಾಪಾರ ಸಂಸ್ಥೆಗಳು ಮಾಡುತ್ತವೆ. ರೈತರಿಂದ ನೇರವಾಗಿ ವ್ಯಾಪಾರ ಸಂಸ್ಥೆಗಳೇ ಖರೀದಿಸುವುದರಿಂದ ಮಧ್ಯವರ್ತಿಗಳ ಕಾಟ ರೈತರಿಗೆ ಇರುವುದಿಲ್ಲ. ರೈತರಿಗೆ ತಾವು ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ದೊರೆಯುತ್ತದೆ. ಉತ್ತಮ ಬೀಜ, ರಸ್ದಗೊಬ್ಬರ, ಹಣಕಾಸಿನ ಅವಶ್ಯಕತೆ ಬಂದಾಗ ವಿದೇಶಿ ವ್ಯಾಪಾರ ಸಂಸ್ಥೆಗಳು ಅವರ ಪರವಾಗಿ ನಿಲ್ಲುತ್ತವೆ. ದೇಶಾದ್ಯಂತ ಮಾರಾಟ ಮಳಿಗೆ ಗಳನ್ನು ತೆಗೆಯುವುದರಿಂದ ಸುಮಾರು ೧ ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ, ಹೀಗೆ ಅನೇಕ ಕನಸುಗಳನ್ನು ಕೇಂದ್ರ ಸರ್ಕಾರ ಬಿತ್ತುತ್ತಿದೆ.

ಇಲ್ಲಿ ಇನ್ನೊಂದು ಮಾತನ್ನು ಗಮನಿಸಬೇಕು. ಕೇಂದ್ರವೇ ಹೇಳುವ ಪ್ರಕಾರ ವಿದೇಶಿ ಬಂಡವಾಳ ಶೇಕಡ ೭೦ ರಷ್ಟು, ಮತ್ತು ಉಳಿದ ೩೦% ಇಲ್ಲೇ ತಯಾರಾದ ಪದಾರ್ಥಗಳನ್ನು ಮಾರಾಟ ಮಾಡಬೇಕೆಂಬುದು. ಅಂದರೆ ಶೇಕಡ ೭೦ ಭಾಗ ಹೊರ ದೇಶದಿಂದ ಬಂದರೆ ಉಳಿದ ಶೇಕಡ ೩೦ ರಷ್ಟು ಭಾಗ ಇಲ್ಲಿಯದ್ದೇ ಎಂದು. ಆದರೆ ಇಲ್ಲಿಯೂ ಕೂಡ ಉಳಿದ ೩೦ರಷ್ಟು ಭಾಗವೂ ಹೊರ ದೇಶದಿಂದ ಬಂದು ಇಲ್ಲಿಯೇ ಪುನ: ಪ್ಯಾಕ್ ಗೊಳ್ಳುವ ಸಾಧ್ಯತೆಗಳೇ ಅಧಿಕ. ಇದನ್ನು ಆಂಗ್ಲ ಭಾಷೆಯಲ್ಲಿ ಸ್ಕ್ರೂ ಡ್ರೈವರ್ ಟೆಕ್ನಾಲಜಿ ಎಂದು ಕರೆಯುತ್ತಾರೆ. 

ವಿದೇಶಿ ವ್ಯಾಪಾರ ಸಂಸ್ಥೆಗಳು ಕೋಟ್ಯಾಂತರ ಹಣವನ್ನು ಇಲ್ಲಿ ಹೂಡಿಕೆ ಮಾಡಿ, ಲಾಭಗಳಿಸುವುದನ್ನು ಬಿಟ್ಟು ಇಲ್ಲಿ ರಸ್ತೆ, ಶೀತಾಗಾರ ವ್ಯವಸ್ಥೆ ಮುಂತಾದವುಗಳನ್ನು ಮಾಡಲು ಹೊರಡುತ್ತದೆಯೇ? ಅವರು ಇಲ್ಲಿಗೆ ಬರುವುದು ಕೇವಲ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಮಾತ್ರ ಎಂಬ ವಾದವೂ ಇದೆ. ಈ ವಾದದಲ್ಲಿ ಸತ್ಯವೂ ಕಾಣುತ್ತಿದೆ. ಭಾರತದ ಚಿಲ್ಲರೆ ಮಾರುಕಟ್ಟೆ ವಿಶ್ವದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ. ಇದನ್ನು ಬಿಡಲು ಯಾವ ದೇಶವೂ ತಯಾರಿಲ್ಲ. ಮುಖ್ಯವಾಗಿ ಅಮೇರಿಕಾ ದೇಶಕ್ಕೆ ಭಾರತದ ಮಾರುಕಟ್ಟೆ ಅತ್ಯಂತ ಪ್ರಿಯ. ಇಲ್ಲಿ ಇನ್ನೊಂದು ವಿಷಯವನ್ನು ಮೊದಲು ಗಮನಿಸಬೇಕು. ಸ್ಥಳೀಯ ಚಿಲ್ಲರೆ ಮಾರಾಟಗಾರರಿಗೆ ತೊಂದರೆಯಾಗುವುದೆಂದು ಅಮೇರಿಕಾ ದೇಶದ ನ್ಯೂಯಾರ್ಕ್ ನಗರದಲ್ಲೇ ಮಾರಾಟ ಮಳಿಗೆ ತೆಗೆಯಲು ಅಲ್ಲಿಯ ಸರ್ಕಾರ ಅವಕಾಶ ಕೊಟ್ಟಿಲ್ಲ. ನಾವು ಅವುಗಳನ್ನು ನಮ್ಮ ಎರಡೂ ಕೈಗಳಿಂದ ಸ್ವಾಗತಿಸುತ್ತಿದ್ದೇವೆ. (ಮಿಕ್ಕಿದ್ದು ನಾಳೆಗೆ)

No comments:

Post a Comment