Saturday 17 November 2012

ದಯೆಯೇ ಧರ್ಮದ ಮೂಲ


ದೂರದ ಐರ್ಲ್ಯಾಂಡ್ ನಲ್ಲಿ ದಂತ ವೈದ್ಯೆಯಾಗಿದ್ದ ಸವಿತಾ ಹಾಲಪ್ಪನವರ್ ಅವರ ಯಾತನಾಮಯವಾದ ಸಾವು ಬಹಳ ದುಖ:ಕರ ಸಂಗತಿ. ಇಂತಹವುಗಳು ಆದಾಗ ಮನಸ್ಸುಗಳು ಕಲಕುತ್ತವೆ. ಹೃದಯ ಭಾರವಾಗುತ್ತದೆ. ನಾವು ಇನ್ನೂ ಯಾವ ಯುಗದಲ್ಲಿ ಇದ್ದೇವೆ ಎಂಬುದೇ ಅರ್ಥವಾಗುವುದಿಲ್ಲ. ಜಾತಿ, ಧರ್ಮ ಸಂಪ್ರದಾಯಗಳು ಮಾನವತೆಯನ್ನು ಮೀರಿದಾಗ ಇಂತಹ ಅವಘಡಗಳು ಸಂಭವಿಸುತ್ತವೆ. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ. ಅವರ ಕುಟುಂಬವರ್ಗದವರಿಗೆ ಆದ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ.

ಇದರ ಬಗ್ಗೆ ಒಂದು ಚುಟುಕನ್ನು ಬರೆದು ಫೇಸ್ ಬುಕ್ಕಿನಲ್ಲಿ ಹಾಕಲು ತೀರ್ಮಾನಿಸಿದ್ದೆ. ಆ ಚುಟುಕು ಕೆಳಕಂಡಂತೆ ಇದೆ.


ದಯೆ

“ದಯವೇ
ಧರ್ಮದ
ಮೂಲ”
ಭಾರತ ದಲ್ಲಿ!

“ಸಂಪ್ರದಾಯವೇ
ಧರ್ಮದ
ಮೂಲ”
ಐರ್ಲೆಂಡ್ ನಲ್ಲಿ!!

ಇನ್ನೇನು ಫೇಸ್ ಬುಕ್ ನಲ್ಲಿ ಹಾಕುವ ಮೊದಲು ನನಗೆ ಈ ಚುಟುಕು ಯಾಕೋ ಸರಿಯಿಲ್ಲ ಅನಿಸಿತು. ಕಾರಣವೇನೆಂದರೆ ಇದು ಕೇವಲ ಐರ್ಲ್ಯಾಂಡ್ ದೇಶದ ಸಮಸ್ಯೆ ಮಾತ್ರ ಅಲ್ಲ. ಇಂದು ಇದು ಎಲ್ಲಾ ದೇಶದ ಸಮಸ್ಯೆಯೂ ಹೌದು ಎಂದೆನಿಸಿತು. ಇದಕ್ಕೆ ಭಾರತವೂ ಹೊರತಲ್ಲ. ನಮ್ಮ ದೇಶವೂ ಸೇರಿದಂತೆ ಪಾಕಿಸ್ಥಾನ, ಬಂಗ್ಲಾದೇಶ, ಆಫ್ಘಾನಿಸ್ಥಾನ, ಇರಾನ್, ಇರಾಕ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೇರಿಕಾ, ಇಂಗ್ಲೆಂಡ್ ಮೊದಲ್ಗೊಂಡು ಪ್ರತಿಯೊಂದು ದೇಶದಲ್ಲೂ ಧಾರ್ಮಿಕ, ಸಂಪ್ರದಾಯ ಕಾರಣಗಳನ್ನು ಹೇಳಿಕೊಂಡು ಮುಗ್ದರನ್ನು ಅವಮಾನಿಸುವುದು, ಹತ್ಯೆಗೆಯ್ಯುವುದು ನಡದೇ ಇದೆ. ಇದು ಕೊನೆಯಾಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ ಎಂದು ಬಹಳ ನೋವಿನಿಂದಲೇ ಹೇಳಬೇಕಾಗಿದೆ.


ನಮ್ಮ ದೇಶದಲ್ಲೂ ಸಹ ಜಾತಿ, ಸಂಪ್ರದಾಯ, ಅಥವಾ ಮರ್ಯಾದೆ ಹತ್ಯೆಯ ಹೆಸರಿನಲ್ಲಿ ಅನೇಕ ಹೆಣ್ಣು ಮಕ್ಕಳ ಜೀವ ಹತ್ಯೆಯಾಗುವುದು, ಹೆಣ್ಣು ಮಗು ವಿನ ಭ್ರೂಣ ಹತ್ಯೆಯಾಗುವುದು ನಡದೇ ಇದೆ. ಸ್ವಾತಂತ್ರ್ಯ ಬಂದು ೬೫ ವರ್ಷ ವಾದರೂ ದಲಿತರನ್ನು ಅವಮಾನಿಸುವುದು, ಅವರನ್ನು ಊರಿನಿಂದ ಆಚೆ ಇರಿಸಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಅವರಿಗೆ ದಿಗ್ಭಂದನ ಹಾಕುವುದು ಸಹ ಇದೆ. ಇವೆಲ್ಲಾ ಏನನ್ನು ಸೂಚಿಸುತ್ತದೆ? ನಮ್ಮ ಬೌದ್ಧಿಕ ಮಟ್ಟ ಇನ್ನೂ ಸರಿಯಾಗಿ ಬೆಳೆದಿಲ್ಲ ಎಂಬುದನ್ನು ಅಲ್ಲವೇ? ಇದರಲ್ಲಿ ದಯೆ ಎಂಬ ಅರ್ಥ ಎಲ್ಲಿದೆ?  ಮಾನವೀಯತೆ ಎಲ್ಲಿದೆ? ಅವರೂ ಮನುಷ್ಯರು ತಾನೇ? ಅವರಿಗೂ ಸಹ ಎಲ್ಲರಂತೆ ಅಧಿಕಾರಯುತವಾಗಿ ಜೀವಿಸುವ ಹಕ್ಕು ಇದೆ ತಾನೆ.

ಜಾತಿ, ಧರ್ಮ, ಆಚಾರ, ವಿಚಾರ, ಸಂಪ್ರದಾಯಗಳನ್ನು ಯಾರೂ ಧಿಕ್ಕರಿಸುವುದು ಬೇಡ. ಅದನ್ನು ಪಾಲಿಸುವವರು ಅದನ್ನೇ ಹಾಸಿ ಹೊದ್ದು ಕೂಡುವಂತಾಗಬಾರದು ಅಷ್ಟೇ. ಜಾತಿ, ಧರ್ಮದ ಅಮಲನ್ನು ನೆತ್ತಿಗೆ ಹತ್ತಿಸಿಕೊಳ್ಳುವುದರಿಂದ ಮಾನವ ಕುಲಕ್ಕೆ ಒಳಿತಾಗುವ ಬದಲು ಕೆಡಕುಂಟಾಗುವುದೇ ಜಾಸ್ತಿ. ಮೇಲ್ಕಂಡ ಡಾ.ಸವಿತಾ ಹಾಲಪ್ಪನವರ್ ಅವರ ವಿಷಯದಲ್ಲೂ ಸಹ ಆಗಿರುವಂತದ್ದು ಬಹಶಃ ಇದೇ ಇರಬೇಕೇನೋ? ಒಬ್ಬ ವೈದ್ಯ ತನ್ನ ದೇಶದ ಕಾನೂನು ಮತ್ತು ಸಂಪ್ರದಾಯದ ಸುಳಿಯಲ್ಲಿ ಸಿಲುಕಿ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲಿಲ್ಲವೇನೋ?

ಆ ವೈದ್ಯನಲ್ಲಿ ದಯೆ, ಮಾನವೀಯತೆ ಇದ್ದರೂ ಅವನು ತನ್ನ ಧರ್ಮ, ಸಂಪ್ರದಾಯಕ್ಕೆ ಅಂಜಿಯೋ ಅಥವಾ ಇನ್ಯಾವುದೋ ಕಾರಣಕ್ಕೋ ತನ್ನ ವೃತ್ತಿ ಧರ್ಮವನ್ನು ಪಾಲಿಸಲಾಗಲಿಲ್ಲವೆಂದು ತೋರುತ್ತದೆ. ಇದು ನಮ್ಮೆಲ್ಲರ ಕಣ್ಣು ತೆರೆಸಬೇಕು. ಎಲ್ಲಾ ಧರ್ಮದಲ್ಲೂ ಶ್ರೇಷ್ಠವಾದ ವಿಚಾರಗಳನ್ನೇ ತಿಳಿಸಿದ್ದಾರೆ. ನಾವುಗಳು ಅದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳದೆ ಒಬ್ಬರನ್ನೊಬ್ಬರು ನಂಬದೆ, ವಿಶ್ವಾಸವಿಡದೆ ನಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ವಿದ್ಯಾವಂತರೂ, ಬುದ್ದಿವಂತರೂ ಸಹ ಹೊರತಲ್ಲ.

ಮಾನವೀಯತೆಯನ್ನು ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ನಾವು ಈ ಸುಂದರ ಜಗತ್ತನ್ನು ಇನ್ನಷ್ಟು ಮತ್ತಷ್ಟು ಸುಂದರವಾಗಿ ಮಾಡಿ ಮುಂದಿನ ಜನಾಂಗಕ್ಕೆ ಕೊಡಬಹುದು. ನನ್ನ ಜಾತಿಯೇ ಶ್ರೇಷ್ಠ
ನನ್ನ ಧರ್ಮವೇ ಶ್ರೇಷ್ಠ ಎಂಬುದನ್ನು ಬಿಟ್ಟು ಮಾನವೀಯತೆಯೇ ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಬಂದರೆ ಸಾಕು. ಜಾತಿ, ಧರ್ಮ, ಸಂಪ್ರದಾಯಗಳಿಗಿಂತಲೂ ಮಾನವೀಯತೆಯೇ ದೊಡ್ಡದಾಗಬೇಕೆಂಬ ನಿರೀಕ್ಷೆಯಲ್ಲಿ…………

No comments:

Post a Comment