Monday 5 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೨


ಕಳೆದ ಸಂಚಿಕೆಯಿಂದ

ಸಾವಿತ್ರಮ್ಮನವರು ಕೊಟ್ಟ ಕಾಫಿಯನ್ನು ಹೀರಿ “ತುಂಬಾ ಚೆನ್ನಾಗಿದೆ ಆಂಟಿ ಕಾಫಿ, ನಿಜಕ್ಕೂ ಸೂಪರ್, ಇಂಥ ಕಾಫಿಯನ್ನು ನಾನು ನನ್ನ ಜನ್ಮದಲ್ಲೇ ಕುಡಿದಿಲ್ಲ, ಇಂಥ ಕಾಫಿ, ಕಾಫಿ ಡೇ ನಲ್ಲೂ ಸಿಗಲ್ಲ ಅಲ್ವೇನೋ ದರ್ಶನ್” ಅಂದ್ಲು. ದರ್ಶನ್ ಹೌದೆಂದು ತಲೆ ಆಡಿಸಿದ. ಸಾವಿತ್ರಮ್ಮನವರ ಮುಖ ಊರಗಲವಾಯಿತು. ರಾಮರಾಯರು “ನಾನು ಹೇಳ್ಳಿಲ್ವಾ, ನನ್ನ ಹೆಂಡ್ತಿನೂ ಸೂಪರ್, ಅವಳು ಮಾಡುವ ಕಾಫಿನೂ ಸೂಪರ್” ಅಂದ್ರು, ಸಾವಿತ್ರಮ್ಮನವರ ಮುಖ ಕೆಂಪಗಾಯಿತು ನಾಚಿಕೆಯಿಂದ. ರಾಮರಾಯರು “ಈಗ ಹೇಳಿ ನಿಮ್ಮ ಕಥೆ? ಅದೇನೋ ಕೇಳೋಣ” ಅಂದ್ರು.

“ಸರಿ, ಅಂಕಲ್, ಹೇಳ್ತೀನಿ. ಇವನ ಹೆಸ್ರು ನಾಗರಾಜ, ನನ್ನ ಹೆಸ್ರು ರಾಜಲಕ್ಷಿ, ನಾವು ಫೇಸ್ ಬುಕ್ ಪ್ರೆಂಡ್ಸ್. ಫೇಸ್ ಬುಕ್ ನಲ್ಲಿ ನಾನು ರಮ್ಯಾ ಅಂತ ಹೆಸ್ರು ಚೇಂಜ್ ಮಾಡ್ಕೊಂಡಿದ್ದೀನಿ. ಇವನಿದ್ದಾನಲ್ಲಾ ಇವನು ಫೇಸ್ ಬುಕ್ ನಲ್ಲಿ ಸ್ಟೈಲಾಗಿ ದರ್ಶನ್ ಅಂತ ಹೇಳ್ಕೊಂಡಿದ್ದ. ನಾನು ಇವನ ಫೋಟೋ ನೋಡಿ, ಒಳ್ಳೆ ಮಾಡಲ್ ಥರ ಇದ್ದಾನಲ್ಲಾ ಅಂತ ಮೋಸ ಹೋಗಿ ಇವನಿಗೆ ಫ್ರೆಂಡ್ ಆದೆ. ನೋಡಿ ಹೇಗಿದ್ದಾನೆ ರಿಯಲ್ ಆಗಿ ಒಳ್ಳೆ ರೌಡಿ ಥರಾ, ಸ್ಟುಪಿಡ್ ಅಂದ್ಲು”, ಮಧ್ಯದಲ್ಲಿ ಬಾಯಿ ಹಾಕಿ ನಿನ್ನ ಮುಖ ಕನ್ನಡಿಯಲ್ಲಿ ನೋಡ್ಕೋ, ಕೆಟ್ಟ ಕೋತಿ ಥರ ಇದ್ಯಾ, ಫೇಸ್ ಬುಕ್ ನಲ್ಲಿ ಒಳ್ಳೆ ಮಾಡಲ್ ಫೋಟೊ ಹಾಕಿ ನನ್ನ ಯಾಮಾರಿಸುವುದಕ್ಕೆ ನೋಡ್ದೆ, ಅಲ್ವಾ, ಯೂ ಬಿಚ್” ಅಂದ, ಅದಕ್ಕೆ ಬಿಚ್, ಗಿಚ್ ಅಂದ್ರೆ ಸಾಯಿಸಿಬಿಡ್ತೀನಿ, ಹುಷಾರ್”, ಅಂದ್ಲು. ಆಗ ರಾಮರಾಯರು “ಮೊದಲೇ ಹೇಳಿದ್ನಲ್ಲಾ, ನನ್ನ ಮಗ ಇನ್ಸ್ಪೆಕ್ಟರ್, ಗಲಾಟೆ ಮಾಡಿದರೆ ಇಬ್ಬರನ್ನೂ ಒಳಗೆ ಹಾಕಿಸ್ತೇನೆ” ಅಂದ್ರು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡ್ಕೊಂಡು ಸುಮ್ಮನಾದರು.

“ಸರಿ, ಆಮೇಲೆ” ಅಂದ್ರು ರಾಮರಾಯರು. ಹೀಗೆ ನಾವು ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ಆದ್ವಿ. ಒಬ್ಬರ ಮುಖವನ್ನು ಒಬ್ಬ್ರು ನೋಡ್ದೆ ಇಷ್ಟು ದಿನವೂ ಫೇಸ್ ಬುಕ್, ಮೊಬೈಲ್ ನಲ್ಲೇ ಮಾತಾಡ್ತಾ ಇದ್ವಿ. ಇಷ್ಟರಲ್ಲೇ ಈ ಕೋತಿ ನನ್ಮಗನ ಮೇಲೆ ಲವ್ ಆಯ್ತು” ಅಂದ್ಲು, ನಾಗರಾಜ ಕಣ್ಣು ಬಿಟ್ಟ. ರಾಮರಾಯರು ತುಟಿ ತಮ್ಮ ತುಟಿ ಮೇಲೆ ಬೆರಳು ಇಟ್ಟು ಸುಮ್ಮನಿರು ಅಂತ ಸನ್ನೆ ಮಾಡಿದ್ರು. ಸುಮ್ಮನಾದ. “ಮತ್ತೆ ನಾನೇ ಇವನಿಗೆ ಮೊದ್ಲು ಐ ಲವ್ ಯು, ಅಂದೆ, ಈ ಕೋತಿನೂ ಒಪ್ಪ್ಕೊಂಡ. ಅದ್ರೆ ಇವನ್ನೇ ಮದ್ವೆ ಮಾಡ್ಕೋಬೇಕು ನನ್ನ ಲೈಫ್ ಸೆಟ್ಲ್ ಆಗತ್ತೆ, ಅಂದ್ಕೊಂಡೆ. ಈಗ ಇವನ ಮುಖ ನೋಡಿದ್ರೆ ವಾಂತಿ ಬರತ್ತೆ, ಇವನು ದೊಡ್ಡ ಫೇಕ್, ಇವನು ಫೇಸ್ ಬುಕ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಅಂತ ಹೇಳ್ಕೊಂಡಿದ್ದಾನೆ, ಆದ್ರೆ ಇವನು ಹೋಟೆಲಲ್ಲಿ ಕೆಲಸಮಾಡೋದು. ಇವನ ಹತ್ರ ಒಂದು ಲಡಾಸಿ ಗಾಡಿ ಕೂಡ ಇಲ್ಲ. ಸಂಬಳ ಹತ್ತುಸಾವಿರ ಬರತ್ತೇನೋ, ಫೋನ್ ನಲ್ಲಿ ಸಂಬಳ ಎಪ್ಪತ್ತೈದು ಸಾವಿರ ಅಂದ ಕೇಳಿದ್ಕೆ, ಲೋಫರ್ ನನ್ಮಗ” ಅಂದ್ಲು.

“ಸಾಕ್ಮಾಡೇ, ಕೋತಿ, ಈಗ ನಿನ್ನ ಪುರಾಣ ಬಿಚ್ತೀನಿ” ಸರಿಯಾಗಿ ಕೇಳಿಸ್ಕೋಳಿ ಅಂಕಲ್ ಅಂದ ನಾಗರಾಜ. “ಸರಿ, ಹೇಳಪ್ಪ ನಿಂದೂ ಆಗ್ಲಿ ಪುರಾಣ” ಅಂದ್ರು ರಾಮರಾಯರು. “ನೋಡಿ ಅಂಕಲ್, ಇವಳಿದ್ದಾಳಲ್ಲಾ ಇವಳೇನೂ ಸಾಚ ಅಲ್ಲ, ಹೌದು ನಾನು ಒಪ್ಪಿಕೊಳ್ತೀನಿ. ನನ್ಹತ್ರ ಗಾಡಿ ಇಲ್ಲ. ನನ್ನ ಸಂಬಳನೂ ಹತ್ತು ಸಾವಿರಾನೇ. ನಾನೂ ಇವಳ ಫೋಟೋ ನೋಡಿ ಚಿನಾಗಿದ್ದಾಳಲ್ಲಾ, ನನಗೆ ತಕ್ಕ ಜೋಡಿಯಾಗಬಹುದು ಅಂತ ಅಂದ್ಕೊಡಿದ್ದೆ. ಇವಳು ಕೆಲ್ಸ ಮಾಡೋದು ನರ್ಸಿಂಗ್ ಹೋಂನಲ್ಲಿ ರಿಸೆಪ್ಷನಿಸ್ಟ್ ಆಗಿ.  ಆದರೆ ಹೇಳ್ಕೊಳ್ಳೋದು ಒರಾಕಲ್ ನಲ್ಲಿ ಹೆಚ್.ಆರ್ ಅಂತ, ಸಂಬಳ ಐವತ್ತು ಸಾವಿರ ಅಂತ ಕಿವಿಗೆ ಹೂ ಇಡ್ತಾಳೆ ಫೋನಲ್ಲಿ, ಬಿಚ್ ಅಂದ” ರಾಮರಾಯರು “ನೋಡೂ, ನಾಲ್ಗೆ ಮೇಲೆ ಹಿಡಿತ ಇರಲಿ, ಭಾಷೆ ನಿನ್ನ ಯೋಗ್ಯತೆ ತೋರಿಸತ್ತೆ, ಮೊದಲು ಸರ್ಯಾಗಿ ಮಾತನಾಡೋದು ಕಲ್ತ್ಕೋ” ಅಂತ ಕೋಪದಿಂದ ಮೇಲೆದ್ದರು. ಅವರ ಕೋಪವನ್ನು ಕಂಡ ನಾಗರಾಜ “ಸಾರಿ ಅಂಕಲ್” ಅಂದ, “ನನಗೆ ನೀನು ಸಾರಿ ಹೇಳ್ಬೇಕಾಗಿಲ್ಲ. ಆ ಮಗುಗೆ ಹೇಳು, ಹೆಣ್ಣುಮಕ್ಕಳನ್ನು ಬೈಯ್ಯಬಾರದು, ಅವರನ್ನು ಗೌರವದಿಂದ ನಡೆಸ್ಕೋಬೇಕು, ಇದೇ ನಮ್ಮ ಸಂಸ್ಕೃತಿ, ಅರ್ಥ ಆಯ್ತಾ” ಅಂದ್ರು. “ಆಯ್ತು ಅಂಕಲ್” ಅಂದ. ಅವಳ ಕಡೆ ತಿರುಗಿ “ಸಾರಿ ಕೋತಿ” ಅಂದ. “ನೋಡು ತಿರ್ಗಾ” ಅಂದ ರಾಮರಾಯರು “ಆಮೇಲೆ ಹೇಳಿ” ಅಂತ ಪುನಃ ಕುಳಿತುಕೊಂಡರು. (ಮಿಕ್ಕಿದ್ದು ನಾಳೆಗೆ)

No comments:

Post a Comment