Saturday 24 November 2012

ವಿದೇಶಿ ನೇರ ಬಂಡವಾಳ: ಭಾಗ-೧


ಕಳೆದ ತಿಂಗಳಿಂದ ಸ್ವಲ್ಪ ಮರೆಯಾಗಿದ್ದ ವಿದೇಶಿ ನೇರ ಬಂಡವಾಳದ ಪ್ರಶ್ನೆ ಮತ್ತೆ ಗರಿಕೆದರಿ ಸುದ್ದಿಗೆ ಬಂದಿದೆ. ಇದೇ ತಿಂಗಳು ೨೨ನೆ ತಾರೀಕಿನಂದು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಇದು ಚರ್ಚೆಗೆ ಬರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಆಡಳಿತ ಪಕ್ಷಕ್ಕೆ ಬೆಂಬಲವಿರುವುದರಿಂದ ಮಸೂದೆ ಪಾಸಾಗುವ ಎಲ್ಲಾ ಸಾಧ್ಯತೆಗಳು ಸಹಾ ಮೊದಲ ನೋಟಕ್ಕೆ ಕಾಣುತ್ತಿವೆ. ವಿರೋಧ ಪಕ್ಷಗಳು ಇದರ ಬಗ್ಗೆ ವಿರೋಧ ವ್ಯಕ್ತ ಪಡಿಸಿವೆ. ಅದರೆ ವಿರೋಧಿಸಲು ಅವರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ.

ವಿದೇಶಿ ನೇರ ಬಂಡವಾಳ ಯಾರಿಗೆ ಮುಖ್ಯ ಎಂಬುದು ಮೊದಲು ಯೋಚಿಸಬೇಕಾದ ವಿಷಯ. ಮೊದಲಿಗೆ ಅಧಿಕಾರದಲ್ಲಿರುವ ಪಕ್ಷಕ್ಕೆ ತಮ್ಮ ಮೇರುವ ಆರೋಪಗಳನ್ನು ಶಮನಗೊಳಿಸಿಕೊಳ್ಳುವುದರ ಜೊತೆಜೊತೆಗೆ ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಿಕೊಳ್ಳುವ ಅವಶ್ಯಕತೆ ಬಹಳ ಇದೆ. ಅದರ ಜೊತೆಜೊತೆಗೆ ಅಂತರರಾಷ್ಟೀಯ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯೂ ಇದೆ. ತಾನು ಜಾಗತೀಕರಣಕ್ಕೆ ಬದ್ಧ, ನಮ್ಮ ರಾಷ್ಟ್ರ ಜಾಗತೀಕರಣಕ್ಕೆ ಸದಾ ಬಾಗಿಲು ತೆರೆದೇ ಇದೆ ಎಂದು ಹೊರ ದೇಶಕ್ಕೆ ಸಾರಿ ಸಾರಿ ಹೇಳುವ ಅವಕಾಶಕ್ಕೆ ಅದು ಎದುರು ನೋಡುತ್ತಿತ್ತು.

ಇನ್ನು ವಿರೋಧ ಪಕ್ಷಗಳಿಗೆ ವಿದೇಶಿ ಬಂಡವಾಳವನ್ನು ವಿರೋಧಿಸುವ ಅವಶ್ಯಕತೆ ಬಹಳ ಇದೆ. ಸಾಮಾನ್ಯ ಜನರ ಪರ ನಾನು ಎಂದು ಹೇಳಿಕೊಳ್ಳುವ ಜೊತೆಜೊತೆಗೆ ವಿದೇಶಿ ನೇರ ಬಂಡವಾಳವನ್ನು ಬೇರೆ ಪಕ್ಷ ತಂದರೆ ಅದಕ್ಕೆ ಸಹಿಸಿಕೊಳ್ಳಲು ಅಸಾಧ್ಯ. ಅದರ ಸಂಪೂರ್ಣ ಲಾಭ ತನಗೆ ಸಿಗದೆ ಅಧಿಕಾರ ನಡೆಸುವ ಪಕ್ಷಕ್ಕೆ ಸಿಕ್ಕರೆ ಅದು ಸುಮ್ಮನಿರುತ್ತದೆಯೇ. ತಾನು ಅಧಿಕಾರದಲ್ಲಿದ್ದಾಗ ವಿದೇಶಿ ನೇರಬಂಡವಾಳ ಹರಿದು ಬರಬೇಕು, ಇಲ್ಲದಿದ್ದರೆ ಬೇಡ ಎಂಬ ನಿಲುವು ಅದರದು.  ಪ್ರತಿಯೊಂದು ಪಕ್ಷಕ್ಕೂ ಅಭಿವೃದ್ದಿ ಏನಾದರೂ ಆದರೆ ಅದು ನಮ್ಮ ಕಾಲದಲ್ಲೇ ಆಗಲಿ, ಇಲ್ಲದಿದ್ದರೆ ಜನಪರ ಕಾಳಜಿ ಅಲ್ಲ ಎಂದು ಅದನ್ನು ವಿರೋಧಿಸುವುದು ನಮ್ಮ ರಾಜಕೀಯ ಪಕ್ಷಗಳ ಸಂಪ್ರದಾಯವಾಗಿಬಿಟ್ಟಿದೆ. ಅಭಿವೃದ್ದಿಯ ಹರಿಕಾರವೆಂಬ ಪಟ್ಟ ಸಿಕ್ಕರೆ ನಮಗೇ ಸಿಗಲಿ ಎಂಬ ಸ್ವಾರ್ಥ ಎಲ್ಲರಲ್ಲೂ ತುಂಬಿಕೊಂಡಿದೆ. (ಮಿಕ್ಕಿದ್ದು ನಾಳೆಗೆ)

No comments:

Post a Comment