Friday 9 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೬


ಕಳೆದ ಸಂಚಿಕೆಯಿಂದ

“ಏನಮ್ಮಾ ನಿಂಗೆ ಅವನನ್ನು ಕಂಡ್ರೆ ಇಷ್ಟಾನಾ? ಅವನ್ನ ಮದ್ವೆ ಆಗೋ ಯೋಚನೆ ಏನಾದ್ರೂ ಇದ್ಯಾ? ಹೇಳು, ನಾನು ಅವನ ಹತ್ರ ಮತ್ತು ನಿಮ್ಮ ಮನೆಯಲ್ಲಿ ಹಿರಿಯರ ಹತ್ರ ಮಾತಾಡ್ತೀನಿ” ಅಂತ ಹೇಳಿ “ನಿನ್ಗೋ ನಾಗರಾಜ ಅಂದ್ರು” ಅವರು ಹೇಳಿದ್ದನ್ನು ಕೇಳಿ ಇಬ್ಬರೂ ಒಂದೇ ಸಲ ಶಾಕ್ ಆದ್ರು. “ಮದ್ವೇನಾ?” ಅಂತ ಒಂದೇ ಉಸಿರಿಗೆ ಕೂಗಿ ಇಬ್ಬರೂ ಮುಖ ಮುಖ ನೋಡಿಕೊಂಡರು. ಅವರು ಹೀಗೆ ಏಕ್ದಂ ಮದ್ವೆ ವಿಷಯ ಮಾತಾಡ್ತಾರ ಅಂತ ಅವರು ಅಂದುಕೊಂಡಿರಲಿಲ್ಲ. ಆದರೂ ಅದೇನಾಯ್ತೋ ಗೊತ್ತಿಲ್ಲ, ಇಬ್ಬರಲ್ಲೂ ಏನೋ ಮಿಂಚಿನ ಸಂಚಾರವಾದಂತಾಗಿ ಇಬ್ಬರ ಮನಸ್ಸೂ ಎಲ್ಲೋ ಹಾರಿಹೋದಂತಾಗಿತ್ತು.  “ನಂದೇನೂ ಇಲ್ಲ, ನೀವು ದೊಡ್ಡವರು, ಹೇಗೆ ಹೇಳಿದ್ರೆ ಹಾಗೆ” ಅಂದುಬಿಟ್ಟ ನಾಗರಾಜ ಅನಿರೀಕ್ಷಿತವಾಗಿ. “ಗುಡ್ ಬಾಯ್, ನಿಂದೇನಮ್ಮಾ?” ಅಂದ್ರು. ನಂದೂ ಆಷ್ಟೇ ಅಂಕಲ್, ನೀವು ಹೇಗೆ ಹೇಳಿದ್ರೆ ಹಾಗೆ ಅಂದ್ಲು” ರಾಜಲಕ್ಷ್ಮಿ ನಾಚುತ್ತಾ. “ಗುಡ್ ಗರ್ಲ್, ನೀವಿಬ್ರೂ ಒಳ್ಳೆಯವರು ಆದ್ರೆ ಸುಳ್ಳು ಹೇಳೋದು ಜಾಸ್ತಿ, ಮದ್ವೆ ಆಗೋ ಮೊದಲು ಇದನ್ನು ಬಿಡಿ, ಉದ್ದಾರ ಆಗ್ತೀರಾ” ಅಂದ್ರು ರಾಮರಾಯರು. ಕೇವಲ ಇವೆಲ್ಲಾ ೧-೨ ನಿಮಿಷಗಳಲ್ಲಿ ಮುಗಿದೇಹೋಗಿತ್ತು.

“ನೋಡು ನಾನು ಹೇಳ್ದೆ ಅಂತ ನೀನು ಇವನನ್ನು ಮದ್ವೆ ಮಾಡ್ಕೋಬೇಕಿಲ್ಲ. ಯಾರೊ ಹೇಳಿದ್ರು ಅಂತ ಒಂದೇ ಸಾರಿ ಡಿಸಿಶನ್ ತಗೋಬಾರ್ದು, ಇದು ನಿನ್ನ ಸ್ವಂತ ಜೀವನದ ಪ್ರಶ್ನೆ, ಸರಿಯಾಗಿ ಯೋಚ್ನೆ ಮಾಡು”. ಅಂದ್ರು ರಾಮರಾಯರು. ಸಾವಿತ್ರಮ್ಮನವರು “ಮದ್ವೆ ಅಂದ್ರೆ ಅದನ್ನು ಆಟ ಅಂತ ತಿಳೀಬಾರದು. ಈಗ ಮದ್ವೆ ಆಗಿ ಮುಂದೆ ಇವನ ಜೊತೆ ಸರಿಯಾಗಿ ಸಂಸಾರ ಮಾಡ್ದೆ ಇವನನ್ನು ನೀನು ಬಿಟ್ಟು ಬಿಡೋದು, ಅಥವಾ ಅವನೇ ನಿನ್ನನ್ನು ಬಿಟ್ಟು ಬಿಡೋದು ಅದೆಲ್ಲಾ ಸರಿಹೋಗಲ್ಲಾ. ಮುಂದೆ ನಿಮ್ಮ ಆಟದಲ್ಲಿ ನಿಮ್ಮ ಮಕ್ಕಳು ಎಲ್ಲಿಗೆ ಹೋಗ್ಬೇಕು? ಈಗಲೂ ಕಾಲ ಮಿಂಚಿಲ್ಲ, ಇಬ್ಬರೂ ಕುಳಿತು ಯೋಚ್ನೆ ಮಾಡಿ ಸರಿಯಾದ ನಿರ್ಧಾರಕ್ಕೆ ಬನ್ನಿ, ಈ ವಿಷಯದಲ್ಲಿ ಆತುರದ ನಿರ್ಧಾರ ಬೇಡ. ಇಬ್ಬರೂ ಮೊದಲು ಒಬ್ಬರನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಕಾಲ ಮೇಲೆ ನೀವು ಮೊದಲು ನಿಂತುಕೊಳ್ಳಿ.” ಅಂತ ಇಬ್ಬರಿಗೂ ಬುದ್ದಿ ಹೇಳಿದ್ರು.

“ನೋಡಿ ನಾನು ನಿಮಗೆ ಇನ್ನೊಂದು ವಿಷಯ ಹೇಳ್ತೀನಿ, ನೀವು ಬೇಜಾರು ಮಾಡಿಕೊಳ್ಳಲ್ಲಾ ಅಂದ್ರೆ” ಅಂದ್ರು. ಹೇಳಿ ಅಂಕಲ್, ನೀವು ಏನು ಹೇಳಿದ್ರೂ ಕೇಳ್ತೀವಿ, ನೀವು ದೊಡ್ಡವರು, ಅನುಭವ ಇರೋರು. ಏನು ಹೇಳಿದ್ರೂ ಸರಿಯಾಗೇ ಹೇಳ್ತೀರಿ” ಅಂದ ನಾಗರಾಜ. “ಮೊದಲು ನೀವಿಬ್ಬರೂ ಸುಳ್ಳು ಹೇಳೋದು ಬಿಡಿ. ಯಾರದೋ ಹೆಸ್ರಲ್ಲಿ, ಯಾರದೋ ಫೋಟೊ ಹಾಕಿಕೊಂಡು ಫ್ರೆಂಡ್, ಪ್ರೀತಿ ಅಂದ್ರೆ ಸರೀನಾ? ಅದು ಪ್ರೀತಿನೂ ಅಲ್ಲ, ಸ್ನೇಹಾನೂ ಅಲ್ಲ. ಅದು ಶುದ್ದ ಪ್ಲರ್ಟ್. ಅದೆಲ್ಲಾ ಚೀಪ್ ಮೆಂಟಾಲಿಟಿ. ನೀವು ಬೇರೇ ಯಾರ್ಗೋ ಮೋಸ ಮಾಡಕ್ಕೆ ಹೋಗಿ, ನಿಜ್ವಾಗಿ ನೀವೇ ಮೋಸ ಹೋಗಿದೀರ ಅಲ್ಲದೇ ನಿಮ್ಮ ಫ಼್ರೆಂಡ್ಸ್ ಗ್ರೂಪ್ ಗೂ ಮೋಸ ಮಾಡಿದ್ರಿ. ಸುಳ್ಳು ಜಾಸ್ತಿ ದಿನ ಬದ್ಕಲ್ಲ. ಸತ್ಯಾನೇ ಕೊನೆ ತನ್ಕ ಉಳಿಯೋದು. ನೀವು ನೀವಾಗಿರಿ, ಬೇರೆಯವರ ನೆರಳು ನೀವಾಗಬೇಡಿ. ಬೇರೆಯವರನ್ನು ನೋಡಿ ನಾವು ಅವರ ಥರ ಆಗ್ಬೇಕು ಅನ್ನೋ ಆಸೆ ತಪ್ಪಲ್ಲ, ಅದ್ರೆ ಅದಕ್ಕೆ ನಾವು ಪ್ರಯತ್ನ ಪಡ್ಬೇಕು. ಯಾವುದೂ ಸುಮ್ಮನೆ ಬರಲ್ಲ. ಸುಮ್ಮನೆ ಬರೋದು ಜಾಸ್ತಿ ದಿನ ಕೂಡ ಉಳಿಯಲ್ಲ. ನೀನೂ ಆಷ್ಟೆ ಒಳ್ಳೆ ಉದ್ಯೋಗ ಹುಡುಕಕ್ಕೆ ಪ್ರಯತ್ನಪಡು, ಇಲ್ಲಾಂದ್ರೆ ಯಾವುದಾದರೂ ಒಂದು ಸಣ್ಣ ವ್ಯಾಪಾರ ಮಾಡು, ಚೆನ್ನಾಗಿ ಅದನ್ನು ಬೆಳ್ಸು ದೊಡ್ಡದು ಮಾಡು. ಮೊದಲು ನಾನು ಒಂದು ಅಂಗಡಿಯಲ್ಲಿ ಕೆಲಸ ಮಾಡ್ತಿದ್ದೆ. ಆಮೇಲೆ ರಸ್ತೆಯಲ್ಲಿ ಇಡ್ಲಿ, ದೋಸೆ ಮಾರಾಟ ಮಾಡ್ದೆ.  ಸ್ವಲ್ಪ ಹಣ ಉಳಿಸಿ ಒಂದು ಚಿಕ್ಕ ಹೋಟೆಲ್ ಮಾಡ್ದೆ. ಅದನ್ನೇ ದೊಡ್ಡದಾಗಿ ಬೆಳೆಸ್ದೆ. ಮಕ್ಕಳನ್ನ ಚೆನ್ನಾಗಿ ಓದಿಸ್ದೆ. ಈಗ ಮಕ್ಕಳು ಫಾರಿನಲ್ಲಿದ್ದಾನೆ. ನೋಡಮ್ಮಾ ನೀನು ಆಷ್ಟೆ, ಅವನಿಗೆ ಸಪೋರ್ಟ್ ಮಾಡು. ಈ ಹಣ, ಕಾರು, ಬಂಗ್ಲೆ, ಆಳು ಕಾಳು ಯಾವುದೂ ಶಾಶ್ವತ ಅಲ್ಲ. ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿರಲಿ. ಜಾಸ್ತಿ ಹಣ ಇರೋರನ್ನ ಮದ್ವೆ ಆದ್ರೆ ಸಂತೋಷವಾಗಿರಬಹುದು ಅನ್ನೋದು ಸುಳ್ಳು. ಸಂತೋಷ ಅನ್ನೋದು ನಮ್ಮ ಒಳಗೆ ಇರತ್ತೆ. ಮನುಷ್ಯನಿಗೆ ಹಣ ಬೇಕು ನಿಜ. ಆದ್ರೆ ಅದೇ ಮುಖ್ಯ ಅಲ್ಲ. ಹಣಕ್ಕಿಂತ ಜಾಸ್ತಿ ಈ ಪ್ರಪಂಚದಲ್ಲಿ ಇನ್ನೋ ಎಷ್ಟೋ ವಸ್ತು ಇದೆ. ನಿಮಗೆ ಇದು ಈಗ ಅರ್ಥ ಆಗಲ್ಲ. ನಮ್ಮ ವಯಸ್ಸು ಬಂದಾಗ ನಿಮಗೆ ಇದೆಲ್ಲಾ ಅರ್ಥ ಆಗತ್ತೆ. ಬದುಕು ಎಲ್ಲಾ ಕಲ್ಸತ್ತೆ. ಅದು ಯಾರನ್ನೂ ಬಿಡಲ್ಲ”.

“ಲವ್ ಮ್ಯಾರೇಜ್ ಮಾಡಿಕೊಂಡವರೆಲ್ಲಾ ಸುಖವಾಗಿರ್ತಾರೆ ಅಂತ ಹೇಳಕ್ಕಾಗಲ್ಲ. ಮದ್ವೆಗೆ ಮೊದಲು ಪ್ರೀತಿ ಮಾಡೋಕ್ಕಿಂತ, ಮದ್ವೆ ಆದ್ಮೇಲೆ ಪ್ರೀತಿ ಮಾಡೋದು ಮುಖ್ಯ ಅಲ್ವಾ. ಎಲ್ಲಕ್ಕಿಂತಲೂ ಹೆಚ್ಚಾಗಿ ಗಂಡ ಹೆಂಡತಿ ಯಾಗುವವರು ಒಬ್ಬರನೊಬ್ಬರು ಸರಿಯಾಗಿ ಅರ್ಥ ಮಾಡ್ಕೋಬೇಕು, ಹೊಂದ್ಕೋಬೇಕು. ಸಂಸಾರದಲ್ಲಿ ಸಣ್ಣ ಪುಟ್ಟ ಕಷ್ಟ, ಬೇಸರ, ಕೋಪ, ತಾಪ ಎಲ್ಲಾ ಇರತ್ತೆ. ಅದನ್ನೇ ದೊಡ್ದು ಮಾಡ್ಕೊಂಡು ಜೀವ್ನ ನರ್ಕ ಮಾಡಿಕೊಳ್ಳಬಾರದು. ಎಲ್ಲರ ಜೀವನದಲ್ಲೂ ಸಿಹಿ ಕಹಿ ಇರತ್ತೆ. ಎಲ್ಲವನ್ನೂ ಎದುರಿಸುವ ಶಕ್ತಿಯನ್ನು ನಾವು ಬೆಳೆಸ್ಕೋಬೇಕಷ್ಜೇ. ಸೌಂದರ್ಯ ದಿನಕಳೆದಂತೆ ಕಡಿಮೆಯಾಗ್ತಾ ಇರತ್ತೆ. ಆದರೆ ವ್ಯಕ್ತಿತ್ವ ಹಾಗಲ್ಲ ನಾವು ಅದನ್ನು ಪ್ರತಿ ದಿನವೂ, ಪ್ರತಿ ಕ್ಷಣವೂ ಬೆಳೆಸ್ಕೊಳಕ್ಕೆ ಪ್ರಯತ್ನಪಡಬಹುದು. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ.” ಅಂದ್ರು. ಸಾವಿತ್ರಮ್ಮನವರು ತಮ್ಮ ಗಂಡನ ಕಡೆಗೆ ಹೆಮ್ಮೆಯಿಂದ ನೋಡಿದ್ರು. ನಾಗರಜ ರಾಜಲಕ್ಷಿ ನಾಚ್ಕೆಯಿಂದ ತಲೆ ತಗ್ಸಿದ್ರು. ಇಬ್ಬರೂ “ಸಾರಿ ಅಂಕಲ್, ನಮ್ಮಿಬ್ಬರನ್ನು ಕ್ಷಮ್ಸಿ, ನಮ್ಮ ತಪ್ಪು ನಮ್ಗೆ ಅರ್ಥ ಆಗಿದೆ, ಇನ್ಮೇಲೆ ಇಂಥ ತಪ್ಪು ಮಾಡಲ್ಲ” ಅಂತ ಹೇಳಿ ದಂಪತಿಗಳ ಕಾಲಿಗೆ ಬಿದ್ದು “ನಮಗೆ ಆಶೀರ್ವಾದ ಮಾಡಿ” ಅಂದ್ರು. “ದೇವರು ನಿಮ್ಮಬ್ಬರನ್ನೂ ಚೆನ್ನಾಗಿಟ್ಟಿರಲಿ, ತಪ್ಪು ಮಾಡೋದು ಸಹಜ, ಅದೂ ನಿಮ್ಮ ವಯಸ್ಸಿನಲ್ಲಿ ಜಾಸ್ತೀನೇ, ಅದ್ರೆ ತಪ್ಪನ್ನು ತಿದ್ಕೋಳ್ಳೋನೇ ನಿಜವಾದ ಮನುಷ್ಯನಾಗೋದು”. (ಮಿಕ್ಕಿದ್ದು ನಾಳೆಗೆ)

No comments:

Post a Comment