Sunday 4 November 2012

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? - ಭಾಗ-೧


ರಾಮರಾಯರದು ಘನತೆಯುಳ್ಳ ವ್ಯಕ್ತಿತ್ವ, ಜನಾನುರಾಗಿ, ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮನಸ್ಸು. ಬಹಳಷ್ಟು ಅನುಕೂಲವಾಗಿದ್ದಾರೆ. ಸ್ನೇಹಿತ, ಬಂಧು ಬಳಗದ ಮಧ್ಯೆ ರಾಮರಾಯರಿಗೆ ವಿಶಿಷ್ಟ ಸ್ಥಾನ ಮಾನ. ಇವರ ಹೆಂಡತಿ ಸಾವಿತ್ರಮ್ಮ. ಗಂಡನಿಗೆ ತಕ್ಕದಾದ ಹೆಂಡತಿ. ಇವರದು ಅನ್ನೋನ್ಯ ದಾಂಪತ್ಯ. ಮುಂದಿನ ತಿಂಗಳು ಇವರ ವಿವಾಹವಾಗಿ ೫೦ ವರ್ಷವಾಗುತ್ತದೆ. ರಾಮರಾಯರು ಮತ್ತು ಸಾವಿತ್ರಮ್ಮ ಜಯನಗರದ ೩ನೇ ಬಡಾವಣೆಯಲ್ಲಿ ವಾಸವಾಗಿದ್ದಾರೆ.  ಮಗ ಅಮೇರಿಕಾದಲ್ಲಿ, ಮಗಳು ಇಂಗ್ಲೇಂಡಿನಲ್ಲಿ ನೆಲೆಸಿದ್ದಾರೆ. ಇಬ್ಬರಿಗೂ ಮದುವೆ ಆಗಿದೆ. ಮಕ್ಕಳೂ ಇದ್ದಾರೆ. ವರ್ಷಕೊಮ್ಮೆ ಇಲ್ಲಿಗೆ ಬಂದು ಒಂದು ತಿಂಗಳಿದ್ದು ಪುನಃ ಹೊರಟುಬಿಡುತ್ತಾರೆ.

ಮೊದಲು ರಾಮರಾಯರು ಇಲ್ಲೇ ಜಯನಗರದ ೪ನೇ ಬಡಾವಣೆಯಲ್ಲಿ ಒಂದು ಹೋಟೆಲ್ ನಡೆಸುತ್ತಿದ್ದರು. ಮೂರು ತಿಂಗಳ ಹಿಂದೆ, ಹೋಟೇಲನ್ನು ಮಾರಿಬಿಟ್ಟಿದ್ದಾರೆ. ಈಗ ಇರುವ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಗ, ಸೊಸೆ, ಮೊಮ್ಮಕ್ಕಳದು ಒಂದೇ ಹಠ ಇಲ್ಲೇ ಅಮೇರಿಕಾಕ್ಕೇ ಬಂದು ಬಿಡಿ ಎಂದು. ರಾಮರಾಯರಿಗೆ ಹೋಗಲು ಇಷ್ಟವಿಲ್ಲ. ತಮ್ಮ ಕೊನೆಯ ಜೀವನ ಇಲ್ಲೇ ಕಳೆಯಲು ಇಚ್ಚಿಸಿದ್ದಾರೆ. ಆದರೆ ಮಗ, ಸೊಸೆಯ ಬಲವಂತ ದಿನವೂ ಹೆಚ್ಚಾಗುತ್ತಿದೆ, ಹಾಗಾಗಿ ಇದ್ದ ಹೋಟೆಲ್ ಅನ್ನು ಮಾರಾಟ ಮಾಡಿ ಅಮೇರಿಕಾಕ್ಕೆ ಹೋಗಲು ಕೊನೆಗೂ ನಿಶ್ಚಯಿಸಿದ್ದಾರೆ. ತಮ್ಮ ಕೊನೆ ಕಾಲದಲ್ಲಿ ಮಗನ ಜೊತೆ ಇದ್ದು ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡಿರುವ ಬಯಕೆ ಸಾವಿತ್ರಮ್ಮನವರದು.

ಇಂತಿರುವ ರಾಮರಾಯರು ತಮ್ಮ ಹೆಂಡತಿ ಸಾವಿತ್ರಿಯೊಂದಿಗೆ ಸಂಜೆಯ ವಿಹಾರಕ್ಕೆ ದಿನವೂ ಲಾಲ್ ಭಾಗ್ ಗೆ ಕಾರಿನಲ್ಲಿ ಹೋಗುವುದು ರೂಡಿ. ಕಾರನ್ನು ಹೊರಗೆ ಪಾರ್ಕ್ ಮಾಡಿ, ಒಳಗೆ ಸ್ವಲ್ಪ ಕಾಲ ಸುತ್ತಾಡಿ ಮುಂದೆಯೇ ಇರುವ ಬೆಂಚಿನಲ್ಲಿ ಸ್ವಲ್ಪ ಹೊತ್ತು ಕುಳಿತು ಹೆಂಡತಿಯೊಂದಿಗೆ ಹರಟುವುದು ಅವರ ದಿನ ನಿತ್ಯದ ಅಭ್ಯಾಸ. ಇಂದು ಅವರಿಗ್ಯಾಕೋ ಸುತ್ತಾಡುವ ಮನಸ್ಸಿರಲಿಲ್ಲ. ಹಾಗೆಯೇ ಸ್ವಲ್ಪ ಹೊತ್ತು ಕುಳಿತು ಮನೆಗೆ ಹೋಗೋಣ ಎಂದು ಅವರು ನಿರ್ಧರಿಸಿದ್ದರು.  ಲಾಲ್ ಭಾಗ್ ಒಳಗೆ ಪ್ರವೇಶಿಸಿದ ಅವರು ತಾವು ದಿನವೂ ಕೂಡುವ ಬೆಂಚು ಕಾಲಿಯಿದೆಯೇ ಎಂದು ನೋಡಿದರು. ಖಾಲಿಯಿತ್ತು, ಅದರ ಬಳಿ ತೆರಳಿ ಅವರು ಅಲ್ಲಿ ಆಸೀನರಾದರು. ಪಕ್ಕದ ಬೆಂಚಿನ ಮೇಲೆ ಒಂದು ಹುಡುಗ ಹುಡುಗಿ ಕುಳಿತು ಜೋರಾದ ದ್ವನಿಯಲ್ಲಿ ಜಗಳ ಆಡುತ್ತಿದ್ದರು. ತಮ್ಮ ಪಕ್ಕದ ಬೆಂಚಿನ ಮೇಲೆ ಕುಳಿತ ಹಿರಿಯ ದಂಪತಿಗಳನ್ನು ನೋಡಿದ ಆ ಜೋಡಿ ತಮ್ಮ ಧ್ವನಿಯನ್ನು ಸ್ವಲ್ಪ ಮೆತ್ತಗೆ ಮಾಡಿಕೊಂಡು ಅಲ್ಲಿಂದ ಎದ್ದು ಹೋಗಲು ಮೊದಲಾದರು. ಹುಡುಗಿ ಅಳುತ್ತಿದ್ದಳು. ಸಾವಿತ್ರಿ ಬಾಯಿಯವರು ಅವಳನ್ನು ಹತ್ತಿರ ಕರೆದು, ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡು “ಯಾಕೆ ಅಳುತ್ತಿದ್ದಿಯಾ? ಸಮಾಧಾನ ಮಾಡ್ಕೋ, ಏನಾಯ್ತು? ಯಾರು ನೀವು?” ಅಂದೆಲ್ಲಾ ವಿಚಾರಿಸಿದರು. ಮೊದಲು ಅವಳು ಏನನ್ನೂ ಹೇಳದೆ ಸುಮ್ಮನೇ ಅಳುತ್ತಿದ್ದಳು.  ನಂತರ ಸ್ವಲ್ಪ ಸುಧಾರಿಸಿಕೊಂಡು “ನೋಡಿ ಆಂಟಿ, ಈ ಕರಿ ಕಾಗೆ ನನ್ನ ಬಾಯ್ ಫ಼್ರೆಂಡ್ ದರ್ಶನ್ ಅಂತ. ನಾನು ರಮ್ಯಾ ಅಂತ ಬಿಳಿ ಕಾಗೆ, ನಾವಿಬ್ಬರು “ಕಾಗೆ ಗ್ರೂಪ್” ಪ್ರೆಂಡ್ಸ್ ಅಂತ ಪರಿಚಯಿಸಿಕೊಂಡಳು. “ಬಿಳಿಕಾಗೆ? ಕರಿ ಕಾಗೆ? ಏನು ಹಾಗಂದ್ರೆ?  ಸ್ವಲ್ಪ ಬಿಡಿಸಿ ಹೇಳಮ್ಮಾ, ನಂಗೆ ಅರ್ಥ ಆಗೋಹಾಗೆ” ಅಂದಾಗ ಅಲ್ಲೇ ಇದ್ದ ಹುಡುಗ “ಏ ಗೂಬೆ ಅವರಿಗೆ ಸರಿಯಾಗಿ ಬಿಡಿಸಿ ಹೇಳು, ರಮ್ಯಾ ಅಂತೆ ರಮ್ಯಾ, ಥೂ ಹೇಳ್ಕೊಳಕ್ಕೆ ನಾಚ್ಕೆ ಆಗಲ್ವಾ? ರಾಜಲಕ್ಷಿ ಅಂತ ಹೆಸರಿಟ್ಕೊಂಡು ರಮ್ಯಾ ಅಂತ ಸುಳ್ಳು ಹೇಳಿ ಮೋಸ ಮಾಡ್ತ್ಯಾ?” ಅಂತ ಕೂಗಾಡಿದ. ಅದಕ್ಕೆ ಅವಳು “ಸುಮ್ಮನಿದ್ದರೆ ಸರಿ ನನಗ್ಯಾಕೋ ನಾಚಿಕೆ, ನಿಂಗೆ ಆಗಬೇಕು ನಾಚಿಕೆ.  ದರ್ಶನ್ ಅಂತೆ ದರ್ಶನ್, ನೀನ್ಯಾವ ದರ್ಶನ್ನೋ, ನಾಗರಾಜ ಅಂತ ಹೆಸರಿಟ್ಟುಕೊಂಡು ನನ್ನ ಯಾಮಾರಿಸುತ್ತೀಯಾ? ಥೂ ನಿನ್ನ ಜನ್ಮಕ್ಕೆ ಇಷ್ಟಾಕಾ” ಅಂತ ಜೋರು ಮಾಡಿದಳು. ಇವರ ಮಾತು ಕೇಳಿ ರಾಮರಾಯರು, ಸಾವಿತ್ರಿ ಬಾಯಿ ಏನೂ ಆರ್ಥವಾಗದೆ ಒಬ್ಬರ ಮುಖವನ್ನೊಬ್ಬರು ನೋಡಕೊಳ್ಳತೊಡಗಿದರು.

ಇವರ ಪರಿಸ್ಥಿತಿ ನೋಡಿ ಆ ಹುಡುಗಿ “ನಾನು ಹೇಳ್ತೀನಿ ಆಂಟಿ, ನೀವು ದೊಡ್ಡವರು ನೀವೇ ತೀರ್ಮಾನ ಮಾಡಿ ಯಾರು ಮೋಸ ಮಾಡಿದರು, ಮತ್ಯಾರು ಮೋಸ ಹೋದ್ರು” ಅಂತ ಹೇಳುವುದಕ್ಕೆ ಶುರು ಮಾಡಿದಳು. “ಈ ಸ್ಟುಪಿಡ್ ಇದಾನಲ್ಲಾ” ಅಂತ ಹೇಳಕ್ಕೆ ಸ್ಟಾರ್ಟ್ ಮಾಡಿದ್ಲು.  “ಏ ಸ್ಟುಪಿಡ್ಪಿ ಗಿಪಿಡ್ ಅಂತಂದ್ರೆ ಅಷ್ಟೆ” ಅಂತ ಅವನು ಹೊಡೆಯಕ್ಕೆ ಕೈ ಎತ್ತಿದ. ರಾಮರಾಯರು ಅವನ ಕಡೆಗೆ ತಿರುಗಿ ಸ್ವಲ್ಪ ಕಠಿಣ ದ್ವನಿಯಲ್ಲಿ “ಏ ಸುಮ್ಮನಿರು, ಹೊಡೆಯಕ್ಕೆ ಕೈ ಎತ್ತಿದ್ರೆ ಅಷ್ಟೆ, ನನ್ನ ಮಗ ಪೋಲೀಸ್ ಇಸ್ಪೆಕ್ಟರ್, ಒಳಗೆ ಹಾಕಿಸಿಬಿಟ್ತೀನಿ” ಅಂತ ಜೋರು ಮಾಡಿದರು. “ಸರಿ, ಈಗ ನೀನು ಹೇಳಮ್ಮಾ, ಏ ನೀನು ಸುಮ್ಮನಿರಬೇಕು, ಸೆಂಟ್ರಲ್ಲಿ ಬಾಯಿ ಹಾಕಬಾರದು, ಆಮೇಲೆ ನೀನು ಹೇಳು, ನಿಂದೂ ಕೇಳ್ತೀನಿ”. ಅಂತಂದ್ರು. ಸಾವಿತ್ರಮ್ಮ ಮೆಲ್ಲಗೆ ಗಂಡನ ಕಿವಿಯಲ್ಲಿ “ರೀ, ನಮಗೆ ಯಾಕೆ ಬೇಕು ಅವರ ಕಥೆ, ನಡೀರಿ ಮನೆಗೆ ಹೋಗೋಣ, ಅಂತ ಉಸಿರಿದರು. ರಾಮರಾಯರು “ಲೇ, ಸುಮ್ಮನಿರೇ, ನಾವು ಹಿರಿಯರು ಮಕ್ಕಳು ಏನೋ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ನಮಗೆ ಆಗುವ ಸಹಾಯ ಮಾಡೋಣ” ಅಂತ ಮೆಲ್ಲಗೆ ಹೇಳಿ, ಇವರ ಕಡೆಗೆ ತಿರುಗಿ “ಬನ್ನಿ, ಇಲ್ಲೇ ಇದೆ ನಮ್ಮ ಮನೆ, ಅಲ್ಲಿ ಕಾಫಿ ಕುಡಿತಾ ಮಾತನಾಡೋಣ, ಇವಳು ಮಾಡುವ ಕಾಫಿ ಸೂಪರ್ ಆಗಿರತ್ತೆ” ಅಂತ ಅವರನ್ನೂ ಎಬ್ಬಿಸಿದರು. ಸಾವಿತ್ರಮ್ಮನವರು ಆ ಕಡೆ ತಿರುಗಿಕೊಂಡು ನಾನ್ಯಾಕೆ ಇವರನ್ನು ಮಾತನಾಡಿಸಿದೆನೋ ಅಂತ ತಮ್ಮ ಹಣೆ ಮೆಲ್ಲಗೆ ಚಚ್ಚಿಕೊಂಡರು.

“ಇಲ್ಲ ಅಂಕಲ್, ಪರ್ವಾಗಿಲ್ಲ, ನಾವು ಬರ್ತೇವೆ” ಅಂತ ಹೇಳಿ “ನಡೆಯೋ ಹೋಗೋಣ” ಅಂತ ಇವನನ್ನು ಎಬ್ಬಿಸಿದಳು.  ಆಗ ರಾಮರಾಯರು “ಇಲ್ಲ, ಬನ್ನಿ ಪರ್ವಾಗಿಲ್ಲ, ಹೋಗೋಣ, ಏನಾಗಲ್ಲ, ಅಲ್ಲೇ ಎಲ್ಲಾ ಕೂತು ಮಾತಾಡೋಣ” ಅಂತ ಬಲವಂತದಿಂದ ಅವರನ್ನು ಎಬ್ಬಿಸಿ ಹೊರಗಡೆ ನಿಲ್ಲಿಸಿದ್ದ ಕಾರಿನಲ್ಲಿ ಎಲ್ಲರನ್ನೂ ಹತ್ತಿಸಿಕೊಂಡು ಮನೆ ಕಡೆ ಕಾರು ತಿರುಗಿಸಿದರು. (ಮಿಕ್ಕಿದ್ದು ನಾಳೆಗೆ)

No comments:

Post a Comment